ಚೆನ್ನೈ: ‘ದೇಶದ ಜನರು ‘ನೀಟ್’ ಪರೀಕ್ಷೆ ಬಗ್ಗೆ ನಂಬಿಕೆ ಕಳೆದುಕೊಂಡಿದ್ದಾರೆ. ಹಾಗಾಗಿ ಪರೀಕ್ಷೆ ಅಗತ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ನಾಯಕ, ನಟ ವಿಜಯ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕಾಗಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಿಂದ (ನೀಟ್) ತಮಿಳುನಾಡಿಗೆ ವಿನಾಯಿತಿ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಈಚೆಗೆ ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕರಿಸಲಾದ ‘ನೀಟ್’ ವಿರುದ್ಧದ ನಿರ್ಣಯವನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಜತೆಗೆ, ತಮಿಳುನಾಡಿನ ಜನರ ಭಾವನೆಗಳನ್ನು ಗೌರವಿಸುವಂತೆ ಕೇಂದ್ರ ಸರ್ಕಾರವನ್ನು ವಿನಂತಿಸುತ್ತೇನೆ ಎಂದು ತಿಳಿಸಿದ್ದಾರೆ.
ಸಂವಿಧಾನದ ಕೆಲವು ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ವಿಜಯ್ ಒತ್ತಾಯಿಸಿದ್ದಾರೆ.