ಮಂಗಳೂರು | ಕಾಮಗಾರಿ ವೇಳೆ ಮಣ್ಣು ಕುಸಿತ ಪ್ರಕರಣ: ಕಟ್ಟಡ ಪರವಾನಗಿ ರದ್ದು

Prasthutha|

ಮಂಗಳೂರು: ಬಲ್ಮಟದಲ್ಲಿ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಮೃತಪಟ್ಟ ಬಳಿಕ ಒಟ್ಟು ನಾಲ್ವರ ಮೇಲೆ ಎಫ್‌ಐಅರ್ ದಾಖಾಲಾಗಿದೆ. ಅಲ್ಲದೆ, ಈ ಕಟ್ಟಡ ನಿರ್ಮಾಣಕ್ಕೆ ನೀಡಲಾದ ಪರವಾನಗಿಯನ್ನು ಮುಂದಿನ ಆದೇಶದವರೆಗೆ ಅಮಾನತು ಮಾಡಲಾಗಿದೆ’ ಎಂದು ಪಾಲಿಕೆ ಆಯುಕ್ತರು ಆದೇಶ ಮಾಡಿದ್ದಾರೆ.

- Advertisement -

ಈ ಕಟ್ಟಡದ ಕಾಮಗಾರಿಯನ್ನು ಮುಂದುವರಿಸಬಾರದು. ಕಾಮಗಾರಿಯ ಸ್ಥಳದಲ್ಲಿ ಬಂದೋಬಸ್ತ್‌ ಕೈಗೊಳ್ಳಬೇಕು. ಸ್ಥಳಕ್ಕೆ ಯಾರೂ ಪ್ರವೇಶಿಸದಂತೆ ನೊಡಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಉದ್ಯಮಿ ರೋಹನ್ ಮೊಂತೆರೊ ಅವರ ಮಾಲಕತ್ವದಲ್ಲಿ ನಿರ್ಮಾಣವಾಗುತ್ತಿದ್ದ ರೋಹನ್ ಸ್ಯೂಟ್ಸ್ ಕಮರ್ಷಿಯಲ್ ಆಯಂಡ್ ಫುಲ್ಲಿ ಫರ್ನಿಷ್ಡ್ ಸ್ಟುಡಿಯೊ ಕಟ್ಟಡ ಕಾಮಗಾರಿಯ ಗುತ್ತಿಗೆದಾರ ಹಾಗೂ ಮೂವರು ಮೇಲ್ವಿಚಾರಕರು ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ನಗರ ಪೂರ್ವ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

- Advertisement -

ಕಟ್ಟಡ ಸಂಕೀರ್ಣದ ತಳಪಾಯದ ತಡೆಗೋಡೆಯಲ್ಲಿ ನೀರು ಸೋರಿಕೆ ತಡೆಯುವ (ವಾಟರ್‌ಪ್ರೂಫಿಂಗ್‌) ಕೆಲಸ ನಿರ್ವಹಿಸುತ್ತಿದ್ದಾಗ ಇಬ್ಬರು ಕಾರ್ಮಿಕರ ಮೇಲೆ ಮಣ್ಣು ಕುಸಿದಿತ್ತು, ಮಣ್ಣು ಕುಸಿತದಿಂದ ಉತ್ತರ ಪ್ರದೇಶದ ಆಜಂಗಡ ಜಿಲ್ಲೆಯ ಪರಾಸಿ ಗ್ರಾಮದ ಚಂದನ್ ಕುಮಾರ್ (30) ಬುಧವಾರ ಮೃತಪಟ್ಟಿದ್ದರು. ಇನ್ನೊಬ್ಬ ಕಾರ್ಮಿಕ ಬಿಹಾರದ ರೋಹ್ಟಾಸ್‌ ಜಿಲ್ಲೆಯ ಅಕ್ಹೊರಾ ಗ್ರಾಮದ ಧವನಿಯಾದ ರಾಜ್ ಕುಮಾರ್ (18) ಅವರನ್ನು ರಕ್ಷಣೆ ಮಾಡಲಾಗಿತ್ತು.

ದುರ್ಘಟನೆ ನಡೆದ ಸ್ಥಳದಲ್ಲಿ 5282.79 ಚ.ಮೀ ವಿಸ್ತೀರ್ಣದ ಕಟ್ಟಡ ನಿರ್ಮಿಸಲು ರೋಹನ್ ಮೊಂತೆರೊ ಅವರು ಪಾಲಿಕೆಯಿಂದ 2024ರ ಮೇ 30ರಂದು ಪರವಾನಗಿ ಪಡೆದಿದ್ದರು. ಮಳೆಗಾಲದಲ್ಲಿ ನೆಲಮಟ್ಟದಿಂದ ಆಳಕ್ಕೆ ಅಗೆದು ಯಾವುದೇ ಕಾಮಗಾರಿ ನಡೆಸಬಾರದು ಎಂದು ಪಾಲಿಕೆ ಸೂಚನೆ ನೀಡಿದ್ದರೂ ಇಲ್ಲಿ ಕಾಮಗಾರಿ ನಡೆಸಲಾಗಿದೆ. ಈ ಕಾಮಗಾರಿಯಿಂದಾಗಿಯೇ ಮಣ್ಣು ಕುಸಿತ ಉಂಟಾಗಿದೆ. ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದು, ಒಬ್ಬ ಕಾರ್ಮಿಕ ಮೃತಪಟ್ಟಿದ್ದಾರೆ. ಹಾಗಾಗಿ ಈ ಕಟ್ಟಡ ನಿರ್ಮಾಣಕ್ಕೆ ನೀಡಲಾದ ಪರವಾನಗಿಯನ್ನು ಮುಂದಿನ ಆದೇಶದವರೆಗೆ ಅಮಾನತು ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತರು ಆದೇಶ ಮಾಡಿದ್ದಾರೆ.

Join Whatsapp
Exit mobile version