ಮಂಗಳೂರು: ಆದಾಯಕ್ಕೂ ಹೆಚ್ಚಿನ ಆಸ್ತಿ: ಎಫ್ ಡಿಎಗೆ 4 ವರ್ಷ ಶಿಕ್ಷೆ, 1 ಕೋಟಿ ರೂಪಾಯಿ ದಂಡ

Prasthutha|

ಮಂಗಳೂರು; ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಗಳಿಸಿದ್ದ ಪ್ರಕರಣದಲ್ಲಿ ಆರೋಪಿಗೆ 4 ವರ್ಷಗಳ ಶಿಕ್ಷೆ ಹಾಗೂ 1 ಕೋಟಿ ರೂಪಾಯಿ ದಂಡ ವಿಧಿಸಿ ನಗರದ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಆದೇಶಿಸಿದೆ.

- Advertisement -

ಬಂಟ್ವಾಳ ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಯು.ಓಂಪ್ರಕಾಶ್ ಹೆಗ್ಡೆ ಶಿಕ್ಷೆಗೊಳಗಾದವರು. ಅವರು ಆದಾಯಕ್ಕಿಂತ ಹೆಚ್ಚು ಪ್ರಮಾಣದ ಆಸ್ತಿ ಹೊಂದಿದ್ದ ಆರೋಪದ ಬಗ್ಗೆ 2014ರ ಜನವರಿ 28ರಂದು ಮಂಗಳೂರು ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಗರದ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ. ಜಕಾತಿ ಅವರು ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡಿದ್ದು, ಯು.ಓಂಪ್ರಕಾಶ್ ಹೆಗ್ಡೆ ವಿರುದ್ಧ ಲಂಚ ನಿರೋಧ ಕಾಯ್ದೆ 1988 ರಂತೆ 04 ವರ್ಷಗಳ ಸಾದಾ ಸಜೆ ಹಾಗೂ 1 ಕೋಟಿ ರೂಪಾಯಿಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಆರೋಪಿ ದಂಡ ಕಟ್ಟಲು ವಿಫಲನಾದಲ್ಲಿ ಮತ್ತೆ ಒಂದು ವರ್ಷ ಸಾದಾ ಸಜೆಯ ಶಿಕ್ಷೆಯನ್ನು ವಿಧಿಸಲಾಗಿದೆ.

- Advertisement -

ಪೊಲೀಸ್ ನಿರೀಕ್ಷಕ ಎಸ್.ವಿಜಯ ಪ್ರಕಾಶ್ ಸಮಗ್ರ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪಾಡಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದಾರೆ.

ಆರೋಪಿ ಯು.ಓಂಪ್ರಕಾಶ್ ಹೆಗ್ಡೆ ಇದೀಗ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Join Whatsapp
Exit mobile version