Home ಕರಾವಳಿ ಮಳೆ ಹಾನಿ: ಜಿಲ್ಲಾಡಳಿತದಿಂದ ಅಗತ್ಯ ಪರಿಹಾರ ಕ್ರಮ- ಸಿಎಂಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ

ಮಳೆ ಹಾನಿ: ಜಿಲ್ಲಾಡಳಿತದಿಂದ ಅಗತ್ಯ ಪರಿಹಾರ ಕ್ರಮ- ಸಿಎಂಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ

ಜಿಲ್ಲಾಧಿಕಾರಿಯವರು ಇಂದು ಸುಳ್ಯ ಹಾಗೂ ಕಡಬ ತಾಲೂಕುಗಳಿಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿ ಗತಿಗಳನ್ನು ಪರಿಶೀಲಿಸಿದರು.

ಮಂಗಳೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ತೀವ್ರ ಮಳೆಯಿಂದ ಹಾನಿಗೊಳಗಾದ ನಾಗರೀಕರಿಗೆ ಜಿಲ್ಲಾಡಳಿತದಿಂದ ಸೂಕ್ತ ಪರಿಹಾರ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು.

  ಮಂಗಳವಾರ ಬೆಂಗಳೂರಿನಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರ ಅಧ್ಯಕ್ಷತೆಯಲ್ಲಿ ಮಳೆ ಪೀಡಿತ 11 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಈ ಮಾಹಿತಿ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಬ ಮತ್ತು ಸುಳ್ಯ ತಾಲೂಕಿನಲ್ಲಿ ತೀವ್ರ ಮಳೆಯಾಗಿದ್ದು ಇದುವರೆಗೆ ಒಟ್ಟು 30 ಮನೆಗಳಿಗೆ ಹಾನಿಯಾಗಿದೆ, 5 ಮನೆಗಳು ಸಂಪೂರ್ಣವಾಗಿ ಹಾನಿಯಾಗಿವೆ. ಕುಕ್ಕೆ ಸುಬ್ರಹ್ಮಣ್ಯದ ಪರ್ವತ ಮುಖಿಯಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ, ಅವರ ಕುಟುಂಬಕ್ಕೆ ಈಗಾಗಲೇ ಅವರಿಗೆ ಪರಿಹಾರವನ್ನು ಪಾವತಿಸಲಾಗಿದೆ, 3 ಪ್ರಾಣಿಗಳು ನೀರಿನಲ್ಲಿ ಕೊಚ್ಚಿ ಹೋಗಿರುವ ಬಗ್ಗೆ ವರದಿಯಾಗಿದೆ.

ಮಳೆಯಿಂದ ಸಂಕಷ್ಟಕ್ಕೊಳಗಾದ ನಾಗರೀಕರಿಗೆ ಸೂಕ್ತ ಪರಿಹಾರ ಒದಗಿಸಲಾಗಿದೆ, ಅತಂತ್ರಗೊಂಡವರನ್ನು ಕಾಳಜಿ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದರು.

ಕೆಲವೆಡೆ ವಾಣಿಜ್ಯ ಸಂಕೀರ್ಣಗಳು ಹಾನಿಗೊಳಗಾಗಿವೆ, ಸುಬ್ರಹ್ಮಣ್ಯದ ದರ್ಪಣ ತೀರ್ಥ ನದಿ ತುಂಬಿ ಹರಿದಿದ್ದು ಆದಿ ದೇಗುಲದ ಗರ್ಭಗುಡಿಯೊಳಗೂ ನೀರು ಹರಿದಿದೆ. ಸುಬ್ರಹ್ಮಣ್ಯಕ್ಕೆ ಹೊಂದಿಕೊಂಡಿರುವ ಬಾಳುಗೋಡು, ಕೊಲ್ಲಮೊಗ್ರ, ಕಲ್ಮಕಾರು ಹಾಗೂ ಇತರೆಡೆ ರಸ್ತೆ ಸಂಪರ್ಕ‌ ಕಡಿತಗೊಂಡಿದೆ, ಎರಡು ತಾಲೂಕುಗಳಲ್ಲಿ ಒಟ್ಟು 23 ಕಡೆ ಹಾನಿಯಾಗಿದ್ದು ಅದನ್ನು ದುರಸ್ಥಿ ಪಡಿಸಲು ಅಗತ್ಯ ಕ್ರಮ‌ಕೈಗೊಳ್ಳಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿಗಳ ಮಾತುಗಳನ್ನು ಆಲಿಸಿದ ಮುಖ್ಯಮಂತ್ರಿಗಳು ಸೂಕ್ತ ಪರಿಹಾರ ಕೈಗೊಳ್ಳುವಂತೆ ಸೂಚಿಸಿದರು.

 ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಹಣಕಾಸು ಇಲಾಖೆ ಎಸಿಎಸ್ ಐಎಸ್ ಎನ್ ಪ್ರಸಾದ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೃಷ್ಣಾ ರೆಡ್ಡಿ, ಪ್ರಕೃತಿ ವಿಕೋಪ ನಿರ್ವಹಣಾ ಸೆಲ್ ಮುಖ್ಯಸ್ಥ ಮನೋಜ ಮತ್ತು ಇತರರು ಉಪಸ್ಥಿತರಿದ್ದರು.

Join Whatsapp
Exit mobile version