Home ಟಾಪ್ ಸುದ್ದಿಗಳು ಮಂಗಳೂರು | ವ್ಯಕ್ತಿಯ ಕೊಲೆಗೆ ಯತ್ನ ಆರೋಪ: ಪ್ರಕರಣ ದಾಖಲು..!

ಮಂಗಳೂರು | ವ್ಯಕ್ತಿಯ ಕೊಲೆಗೆ ಯತ್ನ ಆರೋಪ: ಪ್ರಕರಣ ದಾಖಲು..!

0

ಮಂಗಳೂರು: ನಗರದ ಬಿಜೈ ಕಾಪಿಕಾಡಿನಲ್ಲಿ ಬೈಕ್‌ ಗೆ ಕಾರು ಢಿಕ್ಕಿ ಹೊಡೆಸಿ ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಿ.ಎಸ್.ಎನ್.ಎಲ್ ನಿವೃತ್ತ ಉದ್ಯೋಗಿಯ ವಿರುದ್ಧ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಎಸ್‌ಎನ್‌ಎಲ್ ನಿವೃತ್ತ ಉದ್ಯೋಗಿ ಸತೀಶ್ ಕುಮಾರ್ ಕೆ.ಎಂ ಎಂಬಾತ ತನ್ನ ಮನೆಯ ಮುಂದಿನ ಮನೆಯಲ್ಲಿ ವಾಸವಾಗಿದ್ದ ಮುರಳಿ ಪ್ರಸಾದ್‌ಗೆ ಸದಾಕಾಲ ತಂಟೆ ತಕರಾರು ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎನ್ನಲಾಗಿದೆ. 2023ರಲ್ಲಿ ಮುರಳಿ ಪ್ರಸಾದ್‌ನ ತಂದೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಸತೀಶ್ ಕುಮಾರ್ ವಿನಾ ಕಾರಣ ಬೈಕ್‌ನಲ್ಲಿ ಬಂದು ತಾಗಿಸಿಕೊಂಡು ಹೋಗಿ ಅವಾಚ್ಯ ಶಬ್ದದಿಂದ ನಿಂದಿಸಿದ್ದ ಎನ್ನಲಾಗಿದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆದರೆ ಇದೀಗ ಗುರುವಾರ ಬೆಳಗ್ಗೆ 8.15 ರ ಸುಮಾರಿಗೆ ಬಿಜೈ ಕಾಪಿಕಾಡ್ ನ 6 ನೇ ಮುಖ್ಯ ರಸ್ತೆಯಲ್ಲಿ ಮುರಳಿ ಪ್ರಸಾದ ರವರು ತನ್ನ ಬೈಕ್ ನಲ್ಲಿ ಮನೆಯಿಂದ ಹೋಗುತ್ತಿರುವಾಗ ಆರೋಪಿತ ಸತೀಶ್ ಕುಮಾರ್.ಕೆ.ಎಂ ಅವರು ತಮ್ಮ ಕಾರಿನಲ್ಲಿ ಕಾದು ಕುಳಿತು ಮುರಳಿ ಪ್ರಸಾದರವರನ್ನು ಕೊಲೆಮಾಡುವ ಉದ್ದೇಶದಿಂದ ಕಾರನ್ನು ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆದು ಮುಂದಕ್ಕೆ ಚಲಿಸಿ ನಡೆದುಕೊಂಡು ಹೋಗುತ್ತಿದ್ದ ಹೆಂಗಸಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ನಡೆದುಕೊಂಡು ಹೋಗುತ್ತಿದ್ದ ಹೆಂಗಸಿಗೆ ಗಾಯವಾಗಿದ್ದು, ಮುರಳಿ ಪ್ರಸಾದ ರವರಿಗೂ ಕೂಡ ಗಾಯಗಳು ಉಂಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಆರೋಪಿತ ಸತೀಶ್ ಕುಮಾರ್.ಕೆ.ಎಂ ರವರನ್ನು ವಶಕ್ಕೆ ಪಡೆದುಕೊಂಡು, ಕಾರನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಆರೋಪಿತ ಸತೀಶ್ ಕುಮಾರ್.ಕೆ.ಎಂ ಎಂಬವರು ಪೂರ್ವ ದ್ವೇಷದಿಂದ ಕೊಲೆಮಾಡುವ ಉದ್ದೇಶದಿಂದ ಈ ಕೃತ್ಯವೆಸಗಿದ್ದು, ಈ ಬಗ್ಗೆ ನಗರದ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version