Home ಟಾಪ್ ಸುದ್ದಿಗಳು ಬಜೆಟ್ ಲೋಗೋದಲ್ಲಿ ಕರೆನ್ಸಿ ಚಿಹ್ನೆ ಬದಲಾವಣೆ: ರಾಷ್ಟ್ರೀಯ ಏಕತೆ ದುರ್ಬಲ- ಅಪಾಯಕಾರಿ ಮನಸ್ಥಿತಿಯ ಸೂಚನೆ; ನಿರ್ಮಲಾ...

ಬಜೆಟ್ ಲೋಗೋದಲ್ಲಿ ಕರೆನ್ಸಿ ಚಿಹ್ನೆ ಬದಲಾವಣೆ: ರಾಷ್ಟ್ರೀಯ ಏಕತೆ ದುರ್ಬಲ- ಅಪಾಯಕಾರಿ ಮನಸ್ಥಿತಿಯ ಸೂಚನೆ; ನಿರ್ಮಲಾ ಸೀತಾರಾಮನ್

0

ನವದೆಹಲಿ: ರೂಪಾಯಿ (₹) ಚಿಹ್ನೆಯನ್ನು ಬದಲಾಯಿಸುವ ತಮಿಳುನಾಡು ಸರ್ಕಾರದ ನಡೆಯು ಅಪಾಯಕಾರಿ ಮನಸ್ಥಿತಿಯನ್ನು ಸೂಚಿಸುತ್ತಿದ್ದು, ಪ್ರಾದೇಶಿಕ ಹೆಮ್ಮೆಯ ನೆಪದಲ್ಲಿ ಪ್ರತ್ಯೇಕತಾವಾದಿ ಭಾವನೆಗಳನ್ನು ಉತ್ತೇಜಿಸುತ್ತದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಬರೆದುಕೊಂಡಿರುವ ನಿರ್ಮಲಾ, ಎಲ್ಲ ಚುನಾಯಿತ ಪ್ರತಿನಿಧಿಗಳು ರಾಷ್ಟ್ರ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯಲು ಸಂವಿಧಾನದ ಅಡಿಯಲ್ಲಿ ಪ್ರಮಾಣ ಮಾಡುತ್ತಾರೆ. ರಾಜ್ಯ ಬಜೆಟ್‌ನಿಂದ ‘₹’ನಂತಹ ರಾಷ್ಟ್ರೀಯ ಚಿಹ್ನೆಯನ್ನು ತೆಗೆದು ಹಾಕುವುದು ಈ ಪ್ರತಿಜ್ಞೆಗೆ ವಿರುದ್ಧವಾಗಿದೆ. ರಾಷ್ಟ್ರೀಯ ಏಕತೆಯನ್ನು ದುರ್ಬಲಗೊಳಿಸುತ್ತದೆ’ ಎಂದು ಹೇಳಿದ್ದಾರೆ.

ಹಿಂದಿ ಹೇರಿಕೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಳವಡಿಕೆ ವಿಚಾರವಾಗಿ ಕೇಂದ್ರ ಸರ್ಕಾರದೊಡನೆ ಸಂಘರ್ಷ ನಡೆಸುತ್ತಿರುವ ತಮಿಳುನಾಡು ರಾಜ್ಯ ಸರ್ಕಾರವು, 2025–26ನೇ ಸಾಲಿನ ಬಜೆಟ್‌ನ ಪ್ರತಿಗಳಲ್ಲಿ ರೂಪಾಯಿ ಚಿಹ್ನೆ (₹) ಬಳಸಿಲ್ಲ. ಬದಲಾಗಿ, ತಮಿಳು ಅಕ್ಷರ ‘ರೂ’ ಎಂದು ಮುದ್ರಿಸಿತ್ತು.

ರೂಪಾಯಿ ಚಿಹ್ನೆ ಬಗ್ಗೆ ಡಿಎಂಕೆಗೆ ಸಮಸ್ಯೆ ಇದ್ದರೆ 2010ರಲ್ಲಿ ಏಕೆ ಪ್ರತಿಭಟನೆ ನಡೆಸಿಲ್ಲ? 2010ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರವಧಿಯಲ್ಲಿ ರೂಪಾಯಿ ಚಿಹ್ನೆಯನ್ನು ಅಧಿಕೃತವಾಗಿ ಅಂಗೀಕರಿಸಲಾಗಿತ್ತು. ಅಂದು ಡಿಎಂಕೆ ಆಡಳಿತ ಮೈತ್ರಿಕೂಟದ ಭಾಗವಾಗಿತ್ತು’ ಎಂದು ನಿರ್ಮಲಾ ಹೇಳಿದ್ದಾರೆ.

ವಿಪರ್ಯಾಸವೆಂದರೆ ರೂಪಾಯಿ ಚಿಹ್ನೆಯನ್ನು ಡಿಎಂಕೆ ಮಾಜಿ ಶಾಸಕ ಎನ್. ಧರ್ಮಲಿಂಗಂ ಅವರ ಪುತ್ರ ಟಿ.ಡಿ. ಉದಯ ಕುಮಾರ್ ವಿನ್ಯಾಸಗೊಳಿಸಿದ್ದಾರೆ. ಈಗ ಅದನ್ನು ತೆಗೆದು ಹಾಕುವ ಮೂಲಕ ಡಿಎಂಕೆ ರಾಷ್ಟ್ರೀಯ ಚಿಹ್ನೆಯನ್ನು ತಿರಸ್ಕರಿಸುವುದಲ್ಲದೆ ತಮಿಳು ಯುವಜನತೆಯ ಸೃಜನಶೀಲ ಕೊಡುಗೆಯನ್ನು ನಿರ್ಲಕ್ಷಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version