Home ಕರಾವಳಿ ದಿಗಂತ್ ನಾಪತ್ತೆ ಪ್ರಕರಣ; ಪ್ರಚೋದನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ: ರಮಾನಾಥ ರೈ

ದಿಗಂತ್ ನಾಪತ್ತೆ ಪ್ರಕರಣ; ಪ್ರಚೋದನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ: ರಮಾನಾಥ ರೈ

0

ಮಂಗಳೂರು:‘ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣವನ್ನು ಮುಂದಿಟ್ಟುಕೊಂಡು ಜಿಲ್ಲೆಯ ಕೆಲವು ಮತೀಯವಾದಿ ಸಂಘಟನೆಗಳು ಜನರ ಮನಸ್ಸಲ್ಲಿ ತಪ್ಪು ಭಾವನೆ ಮೂಡಿಸಿ ಸಮಾಜದಲ್ಲಿ ಸಾಮರಸ್ಯಕ್ಕೆ ಕುಂದು ತರುವ ಕೆಲಸ ಮಾಡಿವೆ. ಪ್ರಚೋದನೆ ನೀಡಿದ ಮುಖಂಡರ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು’ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಆಗ್ರಹಿಸಿದರು.‌

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಈ ಪ್ರಕರಣವನ್ನು ನಾಪತ್ತೆ ಎಂದಷ್ಟೇ ಪರಿಗಣಿಸಿದ್ದರೆ ಅದೊಂದು ಆದರ್ಶ ರಾಜಕಾರಣವಾಗುತ್ತಿತ್ತು. ಆದರೆ ಸುಳ್ಳು ಕತೆ ಕಟ್ಟಿ ಜನರಿಗೆ ಪ್ರಚೋದನೆ ನೀಡುವ ಕೆಲಸ ಮಾಡಿದರು. ಪೊಲೀಸರು ವಿದ್ಯಾರ್ಥಿಯನ್ನು ಪತ್ತೆಹಚ್ಚಿದ್ದರಿಂದ ಜಿಲ್ಲೆಯಲ್ಲಿ ದೊಡ್ಡ ಘರ್ಷಣೆ ಸಂಭವಿಸುವುದು ತಪ್ಪಿತು’ ಎಂದರು.

ಶರತ್ ಮಡಿವಾಳ, ಹರೀಶ್‌ ಪೂಜಾರಿ ಹತ್ಯೆ ಪ್ರಕರಣಗಳ ಉದಾಹರಣೆ ನೀಡಿದ ರಮಾನಾಥ ರೈ, ‘ಅಮಾಯಕರನ್ನು ಬಲಿಗೊಟ್ಟು ಅಪಪ್ರಚಾರ ನಡೆಸುವ ತಂತ್ರವನ್ನು ಬಿಜೆಪಿಯವರು ಹಿಂದಿನಿಂದಲೂ ನಡೆಸುತ್ತಾ ಬಂದಿದ್ದಾರೆ. ಕೊಲೆಗಳು ನಡೆದಾಗ ಯಾವುದೇ ಆಧಾರವಿಲ್ಲದೇ ಅದನ್ನು ನಮ್ಮ ತಲೆಗೆ ಕಟ್ಟುಕ ಕೆಲಸ ಮಾಡಿದ್ದಾರೆ. ಈ ರೀತಿಯ ಅಪಪ್ರಚಾರಗಳಿಗೆ ಕಿವಿಗೊಡದೇ ಜನರು ವಾಸ್ತವವನ್ನು ಅರ್ಥ ಮಾಡಿಕೊಳ್ಳುವ ಬುದ್ಧಿವಂತಿಕೆ ಪ್ರದರ್ಶಿಸಬೇಕು’ ಎಂದರು.

‘ಹಿಂಸೆಗೆ ಅಹಿಂಸೆ, ದ್ವೇಷಕ್ಕೆ ಪ್ರೀತಿ ಉತ್ತರ ಎಂದು ಭಾವಿಸಿದವರು ‌ನಾವು. ಜಾತ್ಯತೀತ ನಿಲುವು ಹೊಂದಿದ ಕಾಂಗ್ರೆಸ್‌ ಯಾವತ್ತೂ ಪ್ರತೀಕಾರದ ರಾಜಕಾರಣ ಮಾಡಿಲ್ಲ. ಜಿಲ್ಲೆಯಲ್ಲಿ ಧರ್ಮ, ದೇವರು, ದೇಶಪ್ರೇಮದ ಹೆಸರಿನಲ್ಲಿ ನಡೆದ ಹಿಂಸಾಚಾರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿಲ್ಲ’ ಎಂದರು.

‘ಈಗಿನ ಕೆಲವು ಶಾಸಕರಿಗೆ ಸದನದಲ್ಲಿ ಹಕ್ಕುಚ್ಯುತಿ ಮಂಡಿಸುವುದು ಶೋಕಿ ಯಾಗಿದೆ. ಅದಕ್ಕೆ ಬೇಕಾದ ಸನ್ನಿವೇಶವನ್ನು ಅವರೇ ಸೃಷ್ಟಿಸಿಕೊಳ್ಳುತ್ತಾರೆ. ಕೋಮು ಸಂಘರ್ಷ ಸೃಷ್ಟಿಸಿ ಸಮಾಜದಲ್ಲಿ ಅಶಾಂತಿ ಮೂಡಿಸಲು ಯತ್ನಿಸುವ ಆ ಶಾಸಕರಿಗೆ ವ್ಯಾಪಾರ ವಹಿವಾಟು ನಡೆಸಲು ಬೇರೆ ಸಮುದಾಯದ ಜನ ಆಗುತ್ತದೆ’ ಎಂದರು.‌

‘ಜಿಲ್ಲೆಯಲ್ಲಿ ಕೋಮುದ್ವೇಷದಿಂದ ನಡೆದ ಹತ್ಯೆಗಳ ಸೂತ್ರಧಾರರಿಗೆ ಶಿಕ್ಷೆ ಆಗುತ್ತಿದ್ದರೆ ಈ ಜಿಲ್ಲೆ ಸಾಮರಸ್ಯದ ನೆಲೆವೀಡಾಗುತ್ತಿತ್ತು. ಹತ್ಯೆಗಳ ಸೂತ್ರಧಾರರನ್ನು ಪತ್ತೆ ಹಚ್ಚಲು ಸರ್ಕಾರ ಎಸ್‌ಐಟಿ ರಚಿಸಬೇಕು’ ಎಂದರು.

NO COMMENTS

LEAVE A REPLY

Please enter your comment!
Please enter your name here

Exit mobile version