ಶೀಘ್ರದಲ್ಲೇ `ಕೈ’ಗೆ ಮೇಜರ್ ಸರ್ಜರಿ : ಪ್ರತಿ ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರ ಬದಲಾವಣೆ

Prasthutha|

‘ಮಂಗಳೂರಿನಲ್ಲೂ ಹೊಸ ರಣತಂತ್ರ’, ಯಾರಾಗ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನೂತನ ಸಾರಥಿ?

- Advertisement -

ಮಂಗಳೂರು : ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಅಮೂಲಾಗ್ರ ಬದಲಾವಣೆಗೆ ಮುಂದಾಗಿರುವ ಕೆಪಿಸಿಸಿ ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಪ್ರತಿ ಜಿಲ್ಲೆಯ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಮತ್ತು ಬ್ಲಾಕ್ ಅಧ್ಯಕ್ಷರನ್ನು ಬದಲಾವಣೆ ಮಾಡಲು ತೀರ್ಮಾನ ಮಾಡಲಾಗಿದ್ದು, ಮುಂದಿನ ಒಂದೂವರೆ ತಿಂಗಳ ಒಳಗಾಗಿ ಹೊಸ ಜಿಲ್ಲಾಧ್ಯಕ್ಷರು ಮತ್ತು ಬ್ಲಾಕ್ ಅಧ್ಯಕ್ಷರ ನೇಮಕವಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ (ಆಡಳಿತ) ಜಿ.ಸಿ ಚಂದ್ರಶೇಖರ್ ತಿಳಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಜೊತೆ ಸುದ್ದಿಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್ ಪಕ್ಷವನ್ನು ಕಟ್ಟಲು ಪಣ ತೊಡಲಾಗಿದ್ದು, ಹೊಸ ಸಂಘಟನೆಯ ಮೂಲಕ ಕಾಂಗ್ರೆಸ್ ಪಕ್ಷ ಹೊಸ ರಾಜಕೀಯ ನಡೆಸಲಿದೆ, ಮಂಗಳೂರಿನಲ್ಲೂ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹೊಸ ರಣತಂತ್ರ ಮಾಡಲಿದೆ, ಅದರ ಫಲಿತಾಂಶ ಮುಂದಿನ ದಿನಗಳಲ್ಲಿ ನೋಡಬಹುದು ಎಂದರು.

- Advertisement -

ಕೆಪಿಸಿಸಿ ಅಧ್ಯಕ್ಷರ ಸೂಚನೆಯಂತೆ ಪಕ್ಷ ಸಂಘಟನೆ , ವಿಧಾನಸಭೆ ಮತ್ತು ವಿಧಾನಪರಿಷತ್ ಉಪಚುನಾವಣೆ ಪೂರ್ವ ತಯಾರಿಗಾಗಿ ಕೆಪಿಸಿಸಿಯ ಐವರು ಕಾರ್ಯಾಧ್ಯಕ್ಷರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಎಲ್ಲಾ ಜಿಲ್ಲೆಗಳ 224 ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡಿ ಸಭೆಗಳನ್ನು ನಡೆಸಿ ಪಕ್ಷ ಸಂಘಟಿಸುವ ಕೆಲಸ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.

ಕೆಪಿಸಿಸಿ ಕಾರ್ಯಧ್ಯಕ್ಷ ಮಂಜುನಾಥ್ ಭಂಡಾರಿ ಮಾತನಾಡಿ, ಪಕ್ಷ ಸಂಘಟನೆಯೇ ನಮ್ಮ ಮುಖ್ಯ ಉದ್ದೇಶವಾಗಿದ್ದು, ಐವರು ಕಾರ್ಯಾಧ್ಯಕ್ಷರು ಸೇರಿಕೊಂಡು ಪ್ರತಿ ಜಿಲ್ಲೆಗಳಿಗೂ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದರು. ದಕ್ಷಿಣ ಕನ್ನಡದಲ್ಲೂ ಕಾಂಗ್ರೆಸ್ ಮತಬ್ಯಾಂಕ್ ಅನ್ನು ಬಲಗೊಳಿಸಲಿದ್ದೇವೆ ಎಂದು ತಿಳಿಸಿದರು. ದಕ್ಷಿಣ ಕನ್ನಡದಲ್ಲಿ ಧಾರ್ಮಿಕ ವಿಚಾರಗಳಲ್ಲಿ ರಾಜಕೀಯ ನಡೀತಿದ್ದು ಅದಕ್ಕೆ ಕಡಿವಾಣ ಹಾಕಲು ಅಭಿವೃದ್ಧಿ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಾಗಿ ತಿಳಿಸಿದರು.

ಮಂಗಳೂರಿನ ಬಗ್ಗೆ ಇರುವ ಆತಂಕಗಳನ್ನು ದೂರಮಾಡಿ, ಮಂಗಳೂರನ್ನು ಶೈಕ್ಷಣಿಕ ತಾಣವಾಗಿ ಉಳಿಸಿಕೊಂಡು, ಐಟಿ ಉದ್ಯಮ ಆರಂಬಿಸಲು ಅವಕಾಶ ಮಾಡಿಕೊಟ್ಟು, ಗೋವಾ ಮಾದರಿಯಲ್ಲಿ ಪ್ರವಾಸೋಧ್ಯಮವನ್ನು ಅಭಿವೃದ್ಧಿಪಡಿಸಿ ಜಿಲ್ಲೆಯನ್ನು ಪ್ರಗತಿಯ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು, ಅದಕ್ಕೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರಕಾರದ ಸಹಕಾರ ಬೇಕು ಎಂದರು. ಮಂಗಳೂರಿನ ಜಾನಪದ ಕಲೆಯನ್ನು ಇಡೀ ರಾಜ್ಯಕ್ಕೆ ಪಸರಿಸಲು ಪಿಲಿಕುಳದಲ್ಲಿ ತುಳುನಾಡೋತ್ಸವ ನಡೆಸಲು ಚಿಂತನೆ ಮಾಡಿದ್ದೇವೆ ಎಂದು ಅವರು ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತ್ ಕುಮಾರ್ ಮಾತನಾಡಿ, ಬಿಜೆಪಿ‌ ಒಡೆದಾಳುವ ಮೂಲಕ‌ ಮಂಗಳೂರಿನಲ್ಲಿ ಮೇಲೆ ಬಂದಿದೆ, ಇಲ್ಲಿ ಬಿಜೆಪಿಯನ್ನು ಕೌಂಟರ್ ಮಾಡಲು ಕಾರ್ಯತಂತ್ರ ರೂಪಿಸುತ್ತೇವೆ, ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಮೇಲೆಕ್ಕೆತ್ತಬೇಕು, ಹೀಗಾಗಿ ಪಕ್ಷದ ಸಂಘಟನೆಗಾಗಿ ಹಲವು ಕಾರ್ಯತಂತ್ರ ಮಾಡಿದ್ದೇವೆ, ದಕ್ಷಿಣ ಕನ್ನಡ ಉಡುಪಿ ಸ್ಥಳೀಯ ಸಂಸ್ಥೆಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಖ್ಯೆಗಳ ಕೊರೆತ ಇದ್ದರೂ ಕಾಂಗ್ರೆಸ್ ಪರಿಣಾಮಕಾರಿಯಾಗಿ ಚುನಾವಣೆ ಎದುರಿಸಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರ ಕಾರ್ಯದರ್ಶಿಗಳಾದ ವಿಜಯ ಮುಳಗಂದ್, ಬಾಲರಾಜ್, ಸತ್ಯನಾರಾಯಣ್, ಇನಾಯತ್ ಅಲಿ, ಎಂ.ಎಸ್ ಮಹಮ್ಮದ್ ಮತ್ತು ಕಾಂಗ್ರೆಸ್ ದ.ಕ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಉಪಸ್ಥಿತರಿದ್ದರು.



Join Whatsapp
Exit mobile version