ನವದೆಹಲಿ: ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಿಂದ ಜಾಮೀನು ಪಡೆದ ಎರಡು ದಿನಗಳ ನಂತರ ಸಿಎಂ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡುವುದಾಗಿ ಘೋಷಿಸಿದ ಬಗ್ಗೆ ಬಿಜೆಪಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಇದೆಲ್ಲಾ ಕೇಜ್ರಿವಾಲ್ ಅವರ ಪಿಆರ್ ಸ್ಟಂಟ್ ಮತ್ತು ಗಿಮಿಕ್ ಎಂದು ಟೀಕಿಸಿದೆ.
ದೆಹಲಿಯ ಜನರ ಭಾವನೆಯಲ್ಲಿ ಅವರು ಇಮೇಜ್ ಪ್ರಾಮಾಣಿಕ ನಾಯಕನ ಬದಲಿಗೆ ಭ್ರಷ್ಟ ನಾಯಕ ಎಂದಿದೆ ಎಂಬುದನ್ನು ಕೇಜ್ರಿವಾಲ್ ಅರ್ಥಮಾಡಿಕೊಂಡಿದ್ದಾರೆ. ಇಂದು ಆಮ್ ಆದ್ಮಿ ಪಕ್ಷ ಇಡೀ ದೇಶದಲ್ಲಿ ಭ್ರಷ್ಟ ಪಕ್ಷ ಎಂದು ಕರೆಯಲ್ಪಡುತ್ತಿದೆ. ಅವರ ಪಿಆರ್ ಸ್ಟಂಟ್ ಭಾಗವಾಗಿ ತಮ್ಮ ಇಮೇಜ್ ಅನ್ನು ಮರುಸ್ಥಾಪಿಸುವ ಸಲುವಾಗಿ ಈ ಗಿಮಿಕ್ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಹೇಳಿದರು.
ಕೇಜ್ರಿವಾಲ್ ಅವರು ಸೋನಿಯಾಗಾಂಧಿ ಅವರನ್ನು ಅನುಸರಿಸಲು ಬಯಸುತ್ತಾರೆ. ಸೋನಿಯಾಗಾಂಧಿ ಅವರು ಮನಮೋಹನ್ ಸಿಂಗ್ ಅವರನ್ನು ಡಮ್ಮಿ ಪ್ರಧಾನಿ ಮಾಡಿ ತೆರೆಮರೆಯಲ್ಲಿ ಸರ್ಕಾರವನ್ನು ನಡೆಸಿದರು. ಇದೆ ಮಾದರಿಯನ್ನು ಕೇಜ್ರಿವಾಲ್ ಅನುಸರಿಸುತ್ತಿದ್ದಾರೆ. ಎಎಪಿಯು ದೆಹಲಿ ಚುನಾವಣೆಯಲ್ಲಿ ಸೋಲುತ್ತಿದೆ. ಜನರು ಅವರ ಹೆಸರಿಗೆ ಮತಚಲಾಯಿಸಲು ಸಾಧ್ಯವಿಲ್ಲ. ಆದ್ದರಿಂದ ಕೇಜ್ರಿವಾಲ್ ಬೇರೆಯವರನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಪ್ರತಿಕ್ರಿಯಿಸಿದ್ದು, ಕೇಜ್ರಿವಾಲ್ ಅವರಿಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ವಿಧಿಸಿರುವುದರಿಂದ ಅವರಿಗೆ ರಾಜೀನಾಮೆ ನೀಡದೆ ಬೇರೆ ದಾರಿಯಿಲ್ಲ ಎಂದು ಹೇಳಿದರು. ಇದು ತ್ಯಾಗ ಅಲ್ಲ, ಸಿಎಂ ಕುರ್ಚಿ ಬಳಿ ಹೋಗುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶದಲ್ಲಿ ಹೇಳಿದೆ. ಕೇಜ್ರಿವಾಲ್ ಯಾವುದೇ ಫೈಲ್‌ಗಳಿಗೆ ಸಹಿ ಮಾಡಲಾಗುವುದಿಲ್ಲ. ಆದ್ದರಿಂದ ಅವರಿಗೆ ಬೇರೆ ಆಯ್ಕೆಯಿಲ್ಲ. ಸುಪ್ರೀಂಕೋರ್ಟ್ ಆದೇಶದ ಕಾರಣ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.ಈಗ ಅವರು ತಮ್ಮ ಹೆಂಡತಿಯನ್ನು ಸಿಎಂ ಮಾಡಲು ಎಲ್ಲಾ ಶಾಸಕರನ್ನು ಮನವೊಲಿಸುವ ಕಾರಣ ಅವರು ಎರಡು ದಿನ ಸಮಯ ಕೇಳಿದ್ದಾರೆ ಎಂದು ಹೇಳಿದರು.