ನನ್ನ ವಿರುದ್ಧ ನಮ್ಮವರೇ ನಡೆಸಿದ ಷಡ್ಯಂತ್ರದ ಬಗ್ಗೆ ಅರುಣ್ ಸಿಂಗ್ ಅವರಿಗೆ ಮಾಹಿತಿ ನೀಡಿದ್ದೇನೆ: ಯತ್ನಾಳ್ ಮತ್ತೊಂದು ಬಾಂಬ್

Prasthutha|

ವಿಜಯಪುರ: ನನ್ನ ವಿರುದ್ಧ ಬಿಜೆಪಿಯವರು ನಡೆಸಿದ ಎಲ್ಲಾ ಷಡ್ಯಂತ್ರದ ಬಗ್ಗೆ ನಾನು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಮಾಹಿತಿ ನೀಡಿದ್ದೇನೆ ಎಂದು ವಿಜಯಪುರ ನಗರ ಶಾಸಕ‌ ಬಸವನಗೌಡ ಪಾಟೀಲ್ ಯತ್ನಾಳ್ ತಮ್ಮದೇ ಕೇಸರಿ ಪಾಳಯದ ಮೇಲೆ ಹೊಸ ಬಾಂಬ್ ಸಿಡಿಸಿದ್ದಾರೆ.

- Advertisement -

ವಿಜಯಪುರ ಪ್ರವಾಸದಲ್ಲಿರುವ ಅರುಣ್‌ ಸಿಂಗ್ ಯತ್ನಾಳ್‌ ಅವರನ್ನು ಭೇಟಿ ಮಾಡಿ 15 ನಿಮಿಷ ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ. ಆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಯತ್ನಾಳ್, ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನನ್ನ ವಿರುದ್ಧ ಏನೆಲ್ಲಾ ಷಡ್ಯಂತ್ರ ನಡೆದಿದೆ ಎಂಬುದು ಪಕ್ಷದ ಹೈಕಮಾಂಡ್ಗೆ ಗೊತ್ತಿದೆ. ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶದಿಂದ ರಾಜ್ಯ ಹಾಗೂ ಕೇಂದ್ರದ ನಾಯಕರು ಸಂತಸಪಟ್ಟಿದ್ದಾರೆ ಎಂದು ಹೇಳಿದರು. ಅರುಣ್ ಸಿಂಗ್ ಭೇಟಿಯ ಮಾತುಕತೆ ಸಂದರ್ಭದಲ್ಲಿ ನನ್ನ ವಿರುದ್ಧ ನಡೆದಿದ್ದ ಷಡ್ಯಂತ್ರದ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್ಸಿನ ಶಾಸಕರೊಬ್ಬರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಚುನಾವಣೆ ಮಾಡದೆ ಪಕ್ಷೇತರ ಅಭ್ಯರ್ಥಿಗಳ ಪರ ಚುನಾವಣೆ ಮಾಡಿದರು ಎಂದು ಪರೋಕ್ಷವಾಗಿ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ವಿರುದ್ದ ಗುಡುಗಿದ ಯತ್ನಾಳ್, ಇಂಥ ವ್ಯಕ್ತಿ ವಿಜಯಪುರ ನಗರದಿಂದ ಸ್ಪರ್ಧೆ ಮಾಡಲು ಬಯಸಿದ್ದಾರೆ. ಇಂಥ ಬ್ಲಾಕ್ ಮೇಲ್ ವ್ಯಕ್ತಿಗಳಿಗೆ ನಾನು ಹೆದರುವುದಿಲ್ಲ ಎಂದು ಕುಟುಕಿದರು.

- Advertisement -

ಗುಜರಾತ್ ಚುನಾವಣೆಯ ಬಳಿಕ ಯತ್ನಾಳ್ ಸಿಎಂ ಆಗುತ್ತಾರೆ ಎಂಬ ಸುದ್ದಿಯ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಯಾವಾಗಲೂ ಆ ಗುಂಗಿನಲ್ಲಿ ಇರಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನನಗೆ ಪ್ರಮುಖ ಪಾತ್ರ ವಹಿಸಲಾಗುತ್ತದೆ ಎಂಬ ಸಂಕೇತವನ್ನು ಹೈ ಕಮಾಂಡ್ ಕೊಟ್ಟಿದೆ ಅಷ್ಟೇ ಎಂದು ಹೇಳಿದರು.

Join Whatsapp
Exit mobile version