ನವದೆಹಲಿ: ಕುವೈತ್‌ನಲ್ಲಿ ನಡೆದ ಬೆಂಕಿ ದುರಂತದಲ್ಲಿ ಮೃತಪಟ್ಟ 45 ಮಂದಿ ಭಾರತೀಯರ ಮೃತ ಶರೀರವನ್ನು ಹೊತ್ತ ಭಾರತೀಯ ವಾಯುಪಡೆಯ ವಿಶೇಷ ವಿಮಾನ ಮುಂಜಾನೆ ಕೊಚ್ಚಿಗೆ ಹೊರಟಿದೆ ಎಂದು ತಿಳಿದುಬಂದಿದೆ.
ಭಾರತೀಯರ ಮೃತದೇಹಗಳನ್ನು ಕ್ಷಿಪ್ರವಾಗಿ ಸ್ವದೇಶಕ್ಕೆ ತರಲು ಅಗತ್ಯ ಪ್ರಕ್ರಿಯೆಗಳ ಬಗ್ಗೆ ಕುವೈತ್ ಅಧಿಕಾರಿಗಳ ಜತೆ ನಿಕಟವಾಗಿ ಕಾರ್ಯನಿರ್ವಹಿಸುವ ಸಲುವಾಗಿ ಘಟನಾ ಸ್ಥಳಕ್ಕೆ ತೆರಳಿದ್ದ ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಜೊತೆಗೆ ಇದ್ದಾರೆ.ಸಿಎಂ ಪಿಣರಾಯ್ ವಿಜಯನ್ ಮತ್ತು ಸಂಪುಟ ಸಹೋದ್ಯೋಗಿಗಳು ಶವಗಳನ್ನು ಸ್ವೀಕರಿಸಲು ಉಪಸ್ಥಿತರಿರುವರು ಎಂದು ತಿಳಿದು ಬಂದಿದೆ.
ಕುವೈತ್‌ನ ದಕ್ಷಿಣ ನಗರವಾದ ಮಂಗಾಫ್‌ನಲ್ಲಿ 196 ವಲಸೆ ಕಾರ್ಮಿಕರು ತಂಗಿದ್ದ ಏಳು ಅಂತಸ್ತಿನ ಕಟ್ಟಡದಲ್ಲಿ ಬುಧವಾರ ಭಾರಿ ಅಗ್ನಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ 49 ವಿದೇಶಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು 50 ಮಂದಿ ಗಾಯಗೊಂಡಿದ್ದಾರೆ.
ಮೃತ ಭಾರತೀಯರ ಕುಟುಂಬಗಳಿಗೆ ಭಾರತ ಸರಕಾರ ತಲಾ ಎರಡು ಲಕ್ಷ, ಮೃತ ಮಲಯಾಳಿ ಕುಟುಂಬಗಳಿಗೆ ಕೇರಳ ಸರಕಾರ ತಲಾ ಐದು ಲಕ್ಷ ರೂ. ಘೋಷಿಸಿದ್ದರೆ, ಖ್ಯಾತ ಎನ್‌ಆರ್‌ಐ ಉದ್ಯಮಿ ಮತ್ತು ಲುಲು ಗ್ರೂಪ್ ಅಧ್ಯಕ್ಷ ಎಂಎ ಯೂಸುಫ್ ಅಲಿ, ಎಲ್ಲ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.