Home ಟಾಪ್ ಸುದ್ದಿಗಳು ನಾನು ವಿಪಕ್ಷಗಳ ಮಿತ್ರ: ಸ್ಪೀಕರ್‌ ಯು.ಟಿ. ಖಾದರ್‌

ನಾನು ವಿಪಕ್ಷಗಳ ಮಿತ್ರ: ಸ್ಪೀಕರ್‌ ಯು.ಟಿ. ಖಾದರ್‌

ಬೆಂಗಳೂರು: ನಾನು ವಿಪಕ್ಷಗಳ ಮಿತ್ರ. ಹಾಗಿದ್ದರೂ ನನ್ನ ಮೇಲೆ ವಿಪಕ್ಷಗಳಿಗೆ ಅನುಮಾನ ಹೆಚ್ಚಿರುತ್ತದೆ. ನಾನು ವಿಪಕ್ಷಗಳು ಚರ್ಚೆಯಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಅವಕಾಶ ನೀಡುತ್ತೇನೆ. ಏಕೆಂದರೆ ವಿಪಕ್ಷಗಳು ಸಕ್ರಿಯವಾಗಿ ಪಾಲ್ಗೊಂಡರೆ ಸರಕಾರದ ಆಡಳಿತ ಉತ್ತಮಗೊಳ್ಳುತ್ತದೆ. ಸರಕಾರ ರೂಪಿಸುವ ಕಾಯ್ದೆಗಳಲ್ಲಿನ ನ್ಯೂನತೆ ಪರಿಹಾರಗೊಳ್ಳುತ್ತದೆ ಆದರೆ ಮಸೂದೆ ಮಂಡನೆ ಪ್ರಕ್ರಿಯೆ ಸಂದರ್ಭದಲ್ಲಿ ಸರಕಾರದ ಪರ ಇರುವುದು ಅನಿವಾರ್ಯ ಎಂದು ವಿಧಾನಸಭೆಯ ಸ್ಪೀಕರ್‌ ಯು.ಟಿ. ಖಾದರ್‌ ಹೇಳಿದರು.

ಮಂಗಳವಾರ ಬೆಂಗಳೂರು ಪ್ರಸ್‌ಕ್ಲಬ್‌ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನನಗೆ ಸಂವಿಧಾನ ಮತ್ತು ಸದನ ನಡೆಸುವ ನೀತಿ ನಿಯಮಗಳು ಮುಖ್ಯ. ನಾನು ಅದರಂತೆ ಕಾರ್ಯನಿರ್ವಹಿಸುತ್ತೇನೆ. ಆದರೆ ಕೆಲವು ಸಂದರ್ಭದಲ್ಲಿ ನೀತಿ ಮತ್ತು ಸಂಪ್ರದಾಯಗಳ ಮಧ್ಯೆ ತಾಕಲಾಟ ನಡೆಯುತ್ತದೆ. ಕಲಾಪದ ಸಂದರ್ಭದಲ್ಲಿ ಪ್ಲೇ ಕಾರ್ಡ್‌ಗಳನ್ನು ಪ್ರದರ್ಶಿಸುವ ಹಾಗಿಲ್ಲ. ಆದರೂ ಹಿಂದಿನಿಂದಲೂ ಪ್ಲೇ ಕಾರ್ಡ್‌ಗಳನ್ನು ತೆಗೆದುಕೊಂಡು ಧರಣಿ ನಡೆಸುವ ಸಂಪ್ರದಾಯವಿದೆ ಎಂದು ಹೇಳಿದರು.

ಕಳೆದ ಅಧಿವೇಶನದಲ್ಲಿ ನಡೆದ ಶಾಸಕರ ಅಮಾನತು ಪ್ರಕರಣ ಈಗ ಮುಗಿದುಹೋಗಿರುವ ವಿಚಾರ. ಶಾಸಕರನ್ನು ಅಮಾನತು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಸೂಚನೆ ಅಥವಾ ಸನ್ನೆಯನ್ನು ಮಾಡಿಲ್ಲ. ಇದು ನನ್ನದೇ ತೀರ್ಮಾನ ಎಂದು ಖಾದರ್‌ ಹೇಳಿದರು.

ಜನರೊಂದಿಗಿನ ಒಡನಾಟ ಮತ್ತು ಸ್ಪೀಕರ್‌ ಸ್ಥಾನದಲ್ಲಿ ಯಾವುದು ಎಂಬ ಆಯ್ಕೆ ನೀಡಿದರೆ ನಾನು ಜನರೊಂದಿಗಿನ ಒಡನಾಟವನ್ನು ಆಯ್ದುಕೊಳ್ಳುತ್ತೇನೆ, ಸ್ಪೀಕರ್‌ ಆದ ಬಳಿಕ ಜನರೊಂದಿಗಿನ ಒಡನಾಟ ಶೇ. 20ರಷ್ಟು ಕಡಿಮೆಯಾಗಿದೆ. ಆದರೂ ನಾನು ಶಿಷ್ಟಾಚಾರದೊಳಗೆ ಬಂಧಿಯಾಗದೆ ಈಗಲೂ ನನ್ನ ಕ್ಷೇತ್ರ ಉಳ್ಳಾಲದಲ್ಲಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದೇನೆ. ಸ್ಪೀಕರ್‌ ಹುದ್ದೆಯ ಅಧಿಕಾರವನ್ನು ನಾನು ಸದನದೊಳಗೆ ಮಾತ್ರ ಬಳಸುತ್ತಿದ್ದೇನೆ ಎಂದರು.

ವಿಧಾನ ಸೌಧ ಪ್ರವೇಶಕ್ಕೆ ನೂತನ ವ್ಯವಸ್ಥೆ

ವಿಧಾನ ಸೌಧದೊಳಗೆ ಪ್ರವೇಶ ವ್ಯವಸ್ಥೆಗೆ ಕಾಯಕಲ್ಪ ನೀಡಲಾಗುವುದು. ಈ ಬಗ್ಗೆ ಈಗಾಗಲೇ ವಿಧಾನ ಸಭೆ ಸಚಿವಾಲಯ, ಗೃಹ ಇಲಾಖೆಯ ಜತೆ ಸಮಾಲೋಚನೆ ನಡೆಸುತ್ತೇನೆ. ಒಬ್ಬ ವ್ಯಕ್ತಿ ಎಷ್ಟು ಗಂಟೆಗೆ ವಿಧಾನ ಸೌಧ ಪ್ರವೇಶಿಸಿದ, ಎಷ್ಟು ಗಂಟೆಗೆ ಹೊರ ಹೋದ ಎಂಬ ಮಾಹಿತಿ ಲಭ್ಯವಾಗುವ ರೀತಿಯಲ್ಲಿ ಹಾಗೆಯೇ ಜನಸಾಮಾನ್ಯರಿಗೆ ಹೊರೆ ಆಗದಂತೆ ನೂತನ ವ್ಯವಸ್ಥೆ ಜಾರಿಗೊಳಿಸುವುದಾಗಿ ಖಾದರ್‌ ಅವರು ಭರವಸೆ ನೀಡಿದರು.

ಟ್ರೋಲ್ಗೆ ಹೆದರದೇ ಕನ್ನಡ ಪರಿಪಕ್ವಗೊಳಿಸುವೆ

ನನ್ನ ಕನ್ನಡ ಭಾಷೆಯ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಮಾಡಿದ್ದರು. ನಮ್ಮದು ಪುಸ್ತಕದಲ್ಲಿರುವ ಕನ್ನಡ. ನಾನು ಶಾಲೆಯಲ್ಲಿ ಮಾತ್ರ ಕನ್ನಡ ಬಳಸುತ್ತಿದ್ದೆ. ನಮ್ಮೂರಿನಲ್ಲಿ ಹಿಂದೂಗಳು ತುಳು, ಮುಸಲ್ಮಾನರು ಬ್ಯಾರಿ, ಕ್ರಿಶ್ಚಿಯನ್ನರು ಕೊಂಕಣಿ ಮಾತನಾಡುತ್ತಾರೆ. ಆದರೆ ವ್ಯವಹಾರಿಕವಾಗಿ ಎಲ್ಲರೂ ತುಳುವನ್ನು ಬಳಸುತ್ತಾರೆ. ತುಳುವರು ಎಲ್ಲಿ ಹೋದರೂ ತುಳುವಲ್ಲೇ ಮಾತನಾಡುತ್ತಾರೆ. ನನ್ನ ಕನ್ನಡದ ಉಚ್ಚರಣೆಯಲ್ಲಿ ಸಮಸ್ಯೆ ಇರಬಹುದು. ಆದರೆ ಟ್ರೋಲ್‌ಗ‌ಳನ್ನು ಸವಾಲನ್ನಾಗಿ ತೆಗೆದುಕೊಂಡು ನನ್ನ ಕನ್ನಡವನ್ನು ಪರಿಪಕ್ವಗೊಳಿಸುತ್ತೇನೆ ಎಂದು ಖಾದರ್‌ ಹೇಳಿದರು.

Join Whatsapp
Exit mobile version