ನವದೆಹಲಿ: ಸುದರ್ಶನ್ ನ್ಯೂಸ್ ಟೀವಿ ಸಂಪಾದಕ ಸುರೇಶ್ ಚಾವಾಂಕೆ ನಾಯಕತ್ವದಲ್ಲಿ 2021ರ ಡಿಸೆಂಬರ್ ನಲ್ಲಿ ದಿಲ್ಲಿಯಲ್ಲಿ ನಡೆದ ಹಿಂದೂ ಯುವ ವಾಹಿನಿ ಕಾರ್ಯಕ್ರಮದಲ್ಲಿನ ದ್ವೇಷ ಭಾಷಣದ ತನಿಖೆ ಮುಕ್ತಾಯ ಹಂತಕ್ಕೆ ಬಂದಿದೆ ಎಂದು ದೆಹಲಿಯ ಪೊಲೀಸರು ಸರ್ವೋಚ್ಚ ನ್ಯಾಯಾಲಯಕ್ಕೆ ಸೋಮವಾರ ಹೇಳಿಕೆ ನೀಡಿದ್ದಾರೆ.
“ತನಿಖೆಯ ಅಂತಿಮ ಹಂತ ತಲುಪಿದೆ. ಫೊರೆನ್ಸಿಕ್ ಪ್ರಯೋಗಾಲಯದಿಂದ ಧ್ವನಿ ಪರೀಕ್ಷೆಯ ಸ್ಯಾಂಪಲ್ ಬರಬೇಕಾಗಿದೆ.” ಎಂದು ಸಿಜೆಐ ಡಿ. ವೈ. ಚಂದ್ರಚೂಡ್ ನೇತೃತ್ವದ ಪೀಠಕ್ಕೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ. ಎಂ. ನಟರಾಜ್ ಹೇಳಿದರು.
ತೆಹಸೀನ್ ಪೂನಾವಾಲಾ ಕೇಸಿನಲ್ಲಿ ಕೋರ್ಟ್ ನೀಡಿದ ನಿರ್ದೇಶನಗಳನ್ನು ದಿಲ್ಲಿ ಪೊಲೀಸರು ಮೀರಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದು, ಸಿಜೆಐ ಇರುವ ಪೀಠದಲ್ಲಿ ನ್ಯಾಯಾಧೀಶರುಗಳಾದ ಪಿ. ಎಸ್. ನರಸಿಂಹ, ಜೆ. ಬಿ. ಪರ್ದಿವಾಲ ಅವರುಗಳಿದ್ದು ವಿಚಾರಣೆಗೆ ಬಂದಿದೆ.
ಈ ಪ್ರಕರಣದಲ್ಲಿ ದಿಲ್ಲಿ ಪೊಲೀಸರ ತನಿಖೆ ಎಲ್ಲಿಗೆ ಬಂದಿದೆ ಎಂದು ಮೊದಲು ಸುಪ್ರೀಂಕೋರ್ಟ್ ಪ್ರಶ್ನಿಸಿತ್ತು. ಈ ಪ್ರಕರಣದಲ್ಲಿ ಯಾರನ್ನಾದರೂ ಬಂಧಿಸಲಾಗಿದೆಯೇ, ಎಫ್’ಐಆರ್ ದಾಖಲಿಸಲು 5 ತಿಂಗಳು ಏಕಾಯಿತು? ಎಂದು ದಿಲ್ಲಿ ಪೊಲೀಸರನ್ನು ಸಿಜೆಐ ಪ್ರಶ್ನಿಸಿದರು.
ಅರ್ಜಿದಾರರ ಪರ ವಕೀಲ ಶಾದನ್ ಫರಾಸತ್ ಹಾಜರಾದರು. “ಮೊದಲು ಚಾರ್ಜ್ ಶೀಟ್ ಸಲ್ಲಿಕೆಯಾಗಿ ಈ ಕೋರ್ಟಿನೆದುರು ಇಡಲಿ” ಎಂದರು.
ತೀರ್ಪು ಹೇಳುತ್ತ ಸಿಜೆಐ ಚಂದ್ರಚೂಡ್ ಹೀಗಂದರು;
“ಎಎಸ್ ಜಿ ಕೆ. ಎಂ. ನಟರಾಜ್ ಅವರು ತನಿಖೆ ಮುಂಚೂಣಿಗೆ ಬಂದಿರುವುದಾಗಿ ಕೋರ್ಟಿಗೆ ವರದಿ ಸಲ್ಲಿಸಿದ್ದಾರೆ. ಅವರ ಪ್ರಕಾರ ಫೊರೆನ್ಸಿಕ್ ಲ್ಯಾಬಿನಿಂದ ಧ್ವನಿ ಮಾಹಿತಿ ಬರಬೇಕಾಗಿದೆ. ಚಾರ್ಜ್ ಶೀಟ್ ಪ್ರತಿಯನ್ನು ದಾಖಲೆಯಲ್ಲಿ ಇಡಲಾಗುವುದು. ಇದನ್ನು ಏಪ್ರಿಲ್ ಮೊದಲ ವಾರಕ್ಕೆ ಪಟ್ಟಿ ಮಾಡಿ” ಎಂದರು.
ದಿಲ್ಲಿ ಪೊಲೀಸರು ಮೊದಲು ತೆಗೆದುಕೊಂಡ ತೀರ್ಮಾನದಂತೆ ದಿಲ್ಲಿಯ ಹಿಂದೂ ಯುವ ವಾಹಿನಿ ಕಾರ್ಯಕ್ರಮದಲ್ಲಿನ ಮಾತುಗಳು ಅಪರಾಧದಂತಿಲ್ಲ. ದ್ವೇಷ ಭಾಷಣದ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಅರ್ಜಿ ಸಲ್ಲಿಕೆಯಾದಾಗ, ದಿಲ್ಲಿ ಪೊಲೀಸರು ‘ಯಾವುದೇ ಸಮುದಾಯಕ್ಕೆ ಕೆಡುಕಾಗುವಂತಹ ದ್ವೇಷ ಭಾಷಣ ಇರಲಿಲ್ಲ’ ಎಂದು ಕೋರ್ಟಿಗೆ ಪ್ರಮಾಣ ಪತ್ರ ನೀಡಿದ್ದರು.
ಆದರೆ ಅದರ ಬಗ್ಗೆ ಅತೃಪ್ತಿ ಪ್ರಕಟಿಸಿದ ಸುಪ್ರೀಂ ಕೋರ್ಟು, ಹಿರಿಯ ಪೊಲೀಸ್ ಅಧಿಕಾರಿಯಂದ ಸಮರ್ಪಕವಾದ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಕೋರಿತ್ತು. ಸುಪ್ರೀಂ ಕೋರ್ಟ್ ಜಾಡಿಸಿದ ಬಳಿಕ ದಿಲ್ಲಿ ಪೊಲೀಸರು 2022ರ ಮೇ ತಿಂಗಳಲ್ಲಿ ಎಫ್’ಐಆರ್ ಸಲ್ಲಿಸಿ ಈಗ ಇನ್ನೊಂದು ಪ್ರಮಾಣ ಪತ್ರ ಸಲ್ಲಿಸಿದ್ದಾರೆ.