ವಕ್ಫ್ ಕಾಯ್ದೆ ತಿದ್ದುಪಡಿ ಬಳಿಕ ಮೊದಿ ಸರ್ಕಾರದ ಟಾರ್ಗೆಟ್ ಮದರಸಗಳು?
ಮಂಗಳೂರು : ರಾಜ್ಯದಲ್ಲಿರುವ ಎಲ್ಲಾ ಮದರಸಗಳ ಮಾಹಿತಿ ಸಂಗ್ರಹಿಸಿ ಸಲ್ಲಿಸುವಂತೆ ರಾಜ್ಯ ಗುಪ್ತಚರ ಇಲಾಖೆಯು ಪ್ರತಿ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಆಯುಕ್ತರು ಮತ್ತು ಪ್ರತಿ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದೆ. ಗುಪ್ತಚರ ಇಲಾಖೆಯ ಸೂಚನೆಯ ಹಿನ್ನೆಲೆಯಲ್ಲಿ ಕರ್ನಾಟಕದ ಪೊಲೀಸರು ಗುಪ್ತವಾಗಿ ಮದರಸಗಳ ಮಾಹಿತಿ ಸಂಗ್ರಹಿಸಲು ಮುಂದಾಗಿರುವುದು ತಿಳಿದುಬಂದಿದೆ.
ಕೇಂದ್ರ ಸರ್ಕಾರದ ಸೂಚನೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಮದರಸಗಳ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಪೊಲೀಸ್ ಮಹಾ ನಿರ್ದೇಶಕರು ಗುಪ್ತಚರ ಇಲಾಖೆಗೆ ಸೂಚನೆ ನೀಡಿದ್ದರು. ಬಳಿಕ ರಾಜ್ಯ ಗುಪ್ತಚರ ಇಲಾಖೆಯ ನಿರ್ದೇಶಕರು ಪ್ರತಿ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಮದರಸಗಳ ಮಾಹಿತಿ ಸಂಗ್ರಹಿಸುವಂತೆ ಸೂಚನೆ ನೀಡಿದ್ದಾರೆ. ಗುಪ್ತಚರ ಇಲಾಖೆಯ ಆದೇಶದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ತನ್ನ ವ್ಯಾಪ್ತಿಯಲ್ಲಿರುವ ಮದರಸಗಳ ಮಾಹಿತಿ ಸಂಗ್ರಹಿಸುವಂತೆ ಪ್ರತಿ ಪೊಲೀಸ್ ಠಾಣೆಗಳಿಗೆ ಸೂಚನೆ ಕೊಟ್ಟಿದ್ದಾರೆ. ಅದರ ಪ್ರತಿಗಳು ಪ್ರಸ್ತುತ ನ್ಯೂಸ್’ಗೆ ಲಭ್ಯವಾಗಿದೆ.
2023ರಲ್ಲಿ ನಡೆದಿದ್ದ ಡಿಜಿಪಿ ಮತ್ತು ಐಜಿಪಿಗಳ ಸಮ್ಮೇಳನದ ಶಿಫಾರಸ್ಸಿನ ಅನ್ವಯ ಕೇಂದ್ರ ಸರ್ಕಾರದ ಗುಪ್ತದಳದ ಜಂಟಿ ನಿರ್ದೇಶಕರು 26/04/2023 ಮತ್ತು 06/03/2024ರಲ್ಲಿ ಎರಡು ಬಾರಿ ಮದರಸಗಳ ವಿವರ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಮದರಸಗಳ ಮಾಹಿತಿ ಸಂಗ್ರಹಿಸುವಂತೆ ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರು 21/10/2024ರಂದು ರಾಜ್ಯ ಗುಪ್ತದಳದ ನಿರ್ದೇಶಕರಿಗೆ ಸೂಚಿಸಿದ್ದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಸೂಚನೆ ಹಿನ್ನೆಲೆಯಲ್ಲಿ ಗುಪ್ತದಳದ ನಿರ್ದೇಶಕರು ಪ್ರತಿ ಪೊಲೀಸ್ ಆಯುಕ್ತರಿಗೆ ಮತ್ತು ಎಲ್ಲಾ ಎಸ್ ಪಿ ಗಳಿಗೆ 07/11/2024ರಂದು ಫ್ಯಾಕ್ಸ್ ಮತ್ತು ಈಮೇಲ್ ಮೂಲಕ ಮದರಸಗಳ ವಿವರ ನೀಡುವಂತೆ ಕೇಳಿಕೊಂಡಿದ್ದರು. ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ನಗರ ಪೊಲೀಸ್ ಆಯುಕ್ತರಿಗೆ ಮತ್ತು ರಾಜ್ಯದ 31 ಜಿಲ್ಲೆಗಳ ಎಸ್ ಪಿಗಳಿಗೆ ಈ ಸೂಚನೆ ನೀಡಲಾಗಿದೆ.
ಗುಪ್ತಚರ ಇಲಾಖೆಯ ಸೂಚನೆಯಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ 08/11/2024ರಂದು ಕಮಿಷನರೇಟ್ ವ್ಯಾಪ್ತಿಯ ಪ್ರತಿ ಪೊಲೀಸ್ ಠಾಣೆಗಳಿಗೆ ಆದೇಶ ಮಾಡಲಾಗಿದ್ದು, ತಮ್ಮ ತಮ್ಮ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಮದರಸಗಳ ವಿವರಗಳು ಮತ್ತು ಅದರ ವ್ಯವಸ್ಥಾಪಕರ ಹಿನ್ನೆಲೆ ಪರಿಶೀಲಿಸಿ ಮಾಹಿತಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಮದರಸಗಳ ಹೆಸರು ಮತ್ತು ವಿಳಾಸ, ವ್ಯವಸ್ಥಾಪಕರ ಹೆಸರು ಮತ್ತು ವಿಳಾಸ, ಮದರಸಗಳು ಅಧಿಕೃತ/ಅನಧಿಕೃತ ಎಂಬ ವಿವರ, ನೋಂದಣಿ ನಂಬರ್, ಒಟ್ಟು ವಿದ್ಯಾರ್ಥಿಗಳು, ಅಧ್ಯಾಪಕರ ಸಂಖ್ಯೆ, ಎಷ್ಟು ವರ್ಷದಿಂದ ಮದರಸ ಕಾರ್ಯಾಚರಿಸುತ್ತಿದೆ ಹಾಗೂ ಇನ್ನಿತರ ಮಾಹಿತಿ ನೀಡುವಂತೆ ಮಂಗಳೂರು ನಗರ ಕಾನೂನು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತರು ಕಮಿಷನರೇಟ್ ವ್ಯಾಪ್ತಿಯ ಪ್ರತಿ ಪೊಲೀಸ್ ಠಾಣೆಗಳಿಂದ ವಿವರ ಕೋರಿದ್ದಾರೆ.
ರಾಜ್ಯದಲ್ಲಿ ಗುಪ್ತವಾಗಿ ಮದರಸಗಳ ಮಾಹಿತಿ ಸಂಗ್ರಹಿಸುತ್ತಿರುವ ವಿಚಾರ ಬೆಳಕಿಗೆ ಬಂದಿದ್ದು ಇದಕ್ಕೆ ರಾಜ್ಯದ ಮುಸ್ಲಿಂ ಸಮುದಾಯ ಆಕ್ಷೇಪ ವ್ಯಕ್ತಪಡಿಸಿದೆ. ವಕ್ಫ್ ಆಸ್ತಿಗಳ ವಿವಾದ ತಲೆದೋರಿರುವ ಸಮಯದಲ್ಲೇ ಮರದಸರಗಳ ಬಗ್ಗೆ ಗುಪ್ತವಾಗಿ ಮಾಹಿತಿ ಸಂಗ್ರಹಿಸುತ್ತಿರುವ ಉದ್ದೇಶ ಏನು ಎಂಬ ಪ್ರಶ್ನೆಗಳು ಕೇಳಿಬರುತ್ತಿದೆ.
ಮದರಸಗಳ ಬಗ್ಗೆ ಮಾಹಿತಿ ಬೇಕಿದ್ದರೆ ಬಹಿರಂಗವಾಗಿಯೇ ಸಂಗ್ರಹಿಸಬಹುದು, ಅದಕ್ಕೆ ಮುಸ್ಲಿಂ ಸಮುದಾಯ ಸಹಕಾರ ನೀಡಲಿದೆ ಎಂದು ಮುಸ್ಲಿಂ ಮುಖಂಡರು ಪ್ರತಿಕ್ರಿಯಿಸಿದ್ದಾರೆ. ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಮೋದಿ ಸರ್ಕಾರದ ಗುಪ್ತ ಅಜೆಂಡಾಗಳಿಗೆ ಸಹಕಾರ ನೀಡುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಮದರಸಗಳ ಬಗ್ಗೆ ಗುಪ್ತವಾಗಿ ಮಾಹಿತಿ ಸಂಗ್ರಹಿಸುತ್ತಿರುದನ್ನು ನೋಡಿದರೆ ವಕ್ಫ್ ಕಾಯ್ದೆ ತಿದ್ದುಪಡಿ ಬಳಿಕ ಮದರಸಗಳ ಮೇಲೆ ಕೇಂದ್ರ ಸರ್ಕಾರ ಕೆಂಗಣ್ಣು ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.