Home ಟಾಪ್ ಸುದ್ದಿಗಳು ಉಳ್ಳಾಲ | ರಸ್ತೆಗುಂಡಿಗೆ ಮಹಿಳೆ ಬಲಿ : ದ್ವಿಚಕ್ರ ವಾಹನದಿಂದ ಬಿದ್ದ ಮಹಿಳೆ ಮೇಲೆ‌ ಹರಿದ...

ಉಳ್ಳಾಲ | ರಸ್ತೆಗುಂಡಿಗೆ ಮಹಿಳೆ ಬಲಿ : ದ್ವಿಚಕ್ರ ವಾಹನದಿಂದ ಬಿದ್ದ ಮಹಿಳೆ ಮೇಲೆ‌ ಹರಿದ ಕಂಟೇನರ್

ರಸ್ತೆ ಗುಂಡಿ ಮುಚ್ಚದೆ ನಿರ್ಲಕ್ಷಿಸಿರುವ ಜನಪ್ರತಿನಿಧಿಗಳ ವಿರುದ್ಧ SDPI ಆಕ್ರೋಶ

ಉಳ್ಳಾಲ: ರಸ್ತೆ ಗುಂಡಿಗೆ ಸ್ಕೂಟ‌ರ್ ಬಿದ್ದ ಪರಿಣಾಮ ಹಿಂಬದಿ ಸವಾರೆ ರಸ್ತೆಗೆಸೆಯಲ್ಪಟ್ಟು, ಕಂಟೇನರ್ ಲಾರಿಯಡಿಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಚೆಂಬುಗುಡ್ಡೆಯ ಸೇವಾ ಸೌಧದ ಬಳಿ ಶನಿವಾರ ಸಂಜೆ ನಡೆದಿದೆ.

ಮೃತದೇಹ ಸಾಗಿಸಲು ಒಪ್ಪದ 108 ಅಂಬ್ಯುಲೆನ್ಸ್ ಮತ್ತು ರಸ್ತೆ ದುರವಸ್ಥೆಯ ವಿರುದ್ಧ ರೊಚ್ಚಿಗೆದ್ದ ನಾಗರಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಸುರತ್ಕಲ್ ಕುಳಾಯಿ ನಿವಾಸಿ ರೆಹಮತ್ (45) ಮೃತಪಟ್ಟ ಮಹಿಳೆ ಎಂದು ತಿಳಿದು ಬಂದಿದೆ.

ರೆಹಮತ್ ಅವರ ಪತಿ ರಶೀದ್ ಅವರು ಯೆನೆಪೋಯ ಆಸ್ಪತ್ರೆಯಲ್ಲಿ ಇಲೆಕ್ಟಿಕಲ್ ಮೆಂಟೆನೆನ್ಸ್ ಸಿಬ್ಬಂದಿಯಾಗಿದ್ದು ಶನಿವಾರ ಸಂಜೆ ವೇಳೆ ಆಕ್ಟಿವಾ ಸ್ಕೂಟರ್ ನಲ್ಲಿ ಪತ್ನಿಯನ್ನು ಕುಳ್ಳಿರಿಸಿ ದೇರಳಕಟ್ಟೆಯಿಂದ ತೊಕ್ಕೊಟ್ಟು ಕಡೆ ಬರುತ್ತಿದ್ದ ವೇಳೆ ಚೆಂಬುಗುಡ್ಡೆ ಎಂಬಲ್ಲಿ ಸ್ಕೂಟರ್ ಹದಗೆಟ್ಟ ರಸ್ತೆ ಗುಂಡಿಗೆ ಬಿದ್ದಿದೆ.

ಪರಿಣಾಮ ಸ್ಕೂಟರ್ ಸಹ ಸವಾರೆ ರಶೀದ್‌ ಅವರ ಪತ್ನಿ ರೆಹಮತ್ ರಸ್ತೆಗೆಸೆಯಲ್ಪಟ್ಟಿದ್ದು ಆಕೆಯ ಮೇಲೆ ಹಿಂದಿನಿಂದ ಬರುತ್ತಿದ್ದ ಮೆಡಿಕಲ್ ಸರಕಿನ ಕಂಟೇನ‌ರ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಹಿಳೆಯ ಶವ ಅರ್ಧ ಗಂಟೆಗೂ ಹೆಚ್ಚಿನ ಕಾಲ ರಸ್ತೆಯಲ್ಲೇ ಇದ್ದು, ಶವ ಸಾಗಿಸಲು ತಾಂತ್ರಿಕ ಕಾರಣ ನೀಡಿದ 108 ತುರ್ತು ಆಂಬುಲೆನ್ಸ್ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೊಕ್ಕೊಟ್ಟು- ಚೆಂಬುಗುಡ್ಡೆ ಸಂಪರ್ಕದ ಮಂಗಳೂರು ವಿವಿ ರಸ್ತೆಯು ಹೊಂಡ ಗುಂಡಿಗಳಿಂದ ಹದಗೆಟ್ಟಿದ್ದು ಇದನ್ನ ಸರಿಪಡಿಸದ ಲೋಕೋಪಯೋಗಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜನರು ಸುಮಾರು ಒಂದೂವರೆ ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಬಳಿಕ‌ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ. ದಿಢೀರ್ ಪ್ರತಿಭಟನೆಯಿಂದಾಗಿ ಗಂಟೆಗಳ ಟ್ರಾಫಿಕ್ ಕಾಲ ಜಾಮ್ ಉಂಟಾಗಿದ್ದು ಕೊಣಾಜೆ, ಮುಡಿಪುವಿಗೆ ತೆರಳುವ ವಾಹನ ಸವಾರರು ಪರದಾಡುವಂತಾಯಿತು.

ಉಳ್ಳಾಲದಲ್ಲಿ ರಸ್ತೆ ಗುಂಡಿಗೆ ಮಹಿಳೆ ಬಲಿ: ಜನಪ್ರತಿನಿಧಿಗಳ ನಿರ್ಲಕ್ಷವೇ ಕಾರಣ; ಎಸ್‌ಡಿಪಿಐ ಆರೋಪ

ಉಳ್ಳಾಲ ನಗರಸಭಾ ವ್ಯಾಪ್ತಿಯ ತೊಕ್ಕೊಟ್ಟು-ಚೊಂಬಗುಡ್ಡೆ ರಾಜ್ಯ ಹೆದ್ದಾರಿಯಲ್ಲಿರುವ ರಸ್ತೆ ಗುಂಡಿಗೆ ಮಹಿಳೆಯೊಬ್ಬರು ಬಲಿಯಾಗಿದ್ದು, ಈ ದುರಂತಕ್ಕೆ ಸ್ಥಳೀಯ ಶಾಸಕರ ಮತ್ತು ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಎಸ್‌ಡಿಪಿಐ ಮಂಗಳೂರು (ಉಳ್ಳಾಲ) ಕ್ಷೇತ್ರ ಸಮಿತಿ ಅಧ್ಯಕ್ಷರಾದ ಬಶೀರ್ ಎಸ್.ಎಮ್ ಅವರು ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿರುವ ಅವರು ಕಳೆದ ಹಲವಾರು ವರ್ಷಗಳಿಂದ ತೊಕ್ಕೊಟ್ಟು-ಚೊಂಬುಗುಡ್ಡೆ ರಸ್ತೆಯಲ್ಲಿ ಗುಂಡಿಗಳಿದ್ದ ಪರಿಣಾಮ ಹಲವರು ಅಪಘಾತಗಳು ನಡೆದು ಸಾವು ನೋವುಗಳು ಸಂಭವಿಸಿದೆ. ಪಕ್ಷದ ವತಿಯಿಂದ ಮತ್ತು ಸಾರ್ವಜನಿಕರಿಂದ ಸಾಕಷ್ಟು ಮನವಿ ಮತ್ತು ಪ್ರತಿಭಟನೆ ನಡೆಸಿದ ಹೊರತಾಗಿಯೂ ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ ಈ ದುರ್ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.

ಪ್ರಸಕ್ತ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಬೇಕೆಂದು ಬಶೀರ್ ಎಸ್.ಎಮ್ ಪತ್ರಿಕಾ ಹೇಳಿಕೆಯ ಮೂಲಕ ಆಗ್ರಹಿಸಿದ್ದಾರೆ.

Join Whatsapp
Exit mobile version