Home ಟಾಪ್ ಸುದ್ದಿಗಳು ಈ ವರ್ಷ ಹುಟ್ಟುಹಬ್ಬ ಆಚರಣೆ ಬೇಡವೆಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ

ಈ ವರ್ಷ ಹುಟ್ಟುಹಬ್ಬ ಆಚರಣೆ ಬೇಡವೆಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ವರ್ಷ ಜನ್ಮದಿನ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಕೋವಿಡ್-19 ಕಾರಣಕ್ಕೆ ಹುಟ್ಟುಹಬ್ಬ ಆಚರಣೆ ಬೇಡವೆಂದು ಅವರು ಹೇಳಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಮಳೆ-ನೆರೆ ವಿಕೋಪಗಳಿಂದ ತತ್ತರಿಸಿದ್ದಾರೆ. ಹೀಗಾಗಿ ವಿಜೃಂಭಣೆಯಿಂದ ನನ್ನ ಹುಟ್ಟುಹಬ್ಬ ಮಾಡುವುದು ಬೇಡ ಎಂದು ಅವರು ಮನವಿ ಮಾಡಿದ್ದಾರೆ.

ಈ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ.

“ಡಿಸೆಂಬರ್ 16ರಂದು ನನ್ನ ಜನ್ಮದಿನ. ಕಳೆದೆರಡು ವರ್ಷಗಳಿಂದ ಕೋವಿಡ್-19 ಕಾರಣಕ್ಕೆ ನಾವೆಲ್ಲರೂ ಸಂಕಷ್ಟದಲ್ಲಿದ್ದೇವೆ. ಸಾವು-ನೋವು ಕಂಡಿದ್ದೇವೆ. ಮಳೆ-ನೆರೆ ವಿಕೋಪಗಳಿಂದ ತತ್ತರಿಸಿದ್ದೇವೆ. ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಈ ಕಷ್ಟದ ಸಮಯದಲ್ಲಿ ಅದ್ಧೂರಿ ಜನ್ಮದಿನ ಆಚರಣೆ ನನ್ನ ಮನಸ್ಸಿಗೆ ಒಪ್ಪುವ ವಿಚಾರವಲ್ಲ. ಹಾರ-ತುರಾಯಿ ಹಾಕಿ, ಕೇಕ್ ಕತ್ತರಿಸಿ ಸಂಭ್ರಮಿಸುವುದು ಬೇಡ.”

“ನನ್ನ ಪಕ್ಷದ ಎಲ್ಲ ಕಾರ್ಯಕರ್ತರು, ಮುಖಂಡರು, ಹಿತೈಷಿಗಳಲ್ಲಿ ನನ್ನದೊಂದು ಕಳಕಳಿಯ ಮನವಿ. ಅಭಿಮಾನಿಗಳು, ಕಾರ್ಯಕರ್ತರು ಹಣ ಖರ್ಚು ಮಾಡಿಕೊಂಡು ನನ್ನಲ್ಲಿಗೆ ಬರುವುದು ಬೇಡ. ನೀವಿದ್ದಲ್ಲಿಯೇ ಬಡವರಿಗೆ, ದೀನ ದಲಿತರಿಗೆ, ಮಳೆ-ನೆರೆಯಿಂದ ತತ್ತರಿಸಿದ ಜನರಿಗೆ ನೆರವಾಗುವ ಮೂಲಕ ನನ್ನ ಜನ್ಮದಿನಕ್ಕೆ ಸಾರ್ಥಕತೆ ತನ್ನಿ. ಅದ್ಧೂರಿ ಹುಟ್ಟುಹಬ್ಬ ನನಗೆ ಇಷ್ಟವಿಲ್ಲ. ಆ ಅದ್ಧೂರಿತನದಲ್ಲಿ ಕಂಗೆಟ್ಟಿರುವ ಜನರನ್ನು ಅಣಕಿಸುವುದು ಬೇಡ. ನೀವೆಲ್ಲರೂ ಇದ್ದಲ್ಲಿಂದಲೇ ನನ್ನನ್ನು ಆಶೀರ್ವದಿಸಿ, ಹಾರೈಸಿ. ಹೊಸ ಚೈತನ್ಯ ಮತ್ತು ದೃಢ ಸಂಕಲ್ಪದೊಂದಿಗೆ ಪಕ್ಷವನ್ನು ಕಟ್ಟೋಣ. ಸವಾಲುಗಳನ್ನು ಮೆಟ್ಟಿ ನಿಲ್ಲೋಣ” ಎಂದು ಹೆಚ್ಡಿಕೆ ಅವರು ಮನವಿ ಮಾಡಿದ್ದಾರೆ.

Join Whatsapp
Exit mobile version