ಕನ್ನಡ ಮಾಧ್ಯಮ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ: ಅಫ್ಸರ್ ಕೊಡ್ಲಿಪೇಟೆ ಖಂಡನೆ

Prasthutha|

ಬೆಂಗಳೂರು: ಗಡಿನಾಡ ಜನರನ್ನು ಮಹಾರಾಷ್ಟ್ರ ಸರ್ಕಾರ ಮಲತಾಯಿ ಧೊರಣೆಯಿಂದ ಕಂಡು ಯಾವುದೇ ಮೂಲಭೂತ ಸೌಕರ್ಯ ನೀಡದೆ ಸತಾಯಿಸುತ್ತಿದ್ದು, ಇದೀಗ ಅಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳನ್ನು ಮಟ್ಟ ಹಾಕಲು ನಿಂತಿರುವುದು ಖಂಡನೀಯ ಎಂದು SDPI ಮುಖಂಡ ಅಫ್ಸರ್ ಕೊಡ್ಲಿಪೇಟೆ ಹೇಳಿದ್ದಾರೆ.

- Advertisement -

ಗಡಿ ಭಾಗವನ್ನು ಹಂಚಿಕೊಂಡಿರುವ ನಮ್ಮ ಕರ್ನಾಟಕಕ್ಕೂ ನೆರೆಯ ಮಹಾರಾಷ್ಟ್ರಕ್ಕೂ ಎಣ್ಣೆ ಸೀಗೆಕಾಯಿ ಸಂಬಂಧ. ಸದಾ ಕಾಲ ನೆಲ, ಜಲ, ಭಾಷೆ ವಿಚಾರಗಳಲ್ಲಿ ಜಗಳ ಇದ್ದೇ ಇದೆ. ಹಾಗೆಯೇ ಮಹಾಜನ್ ವರದಿ ಅನುಷ್ಠಾನ ವಿಚಾರದಲ್ಲೂ ಸಮಸ್ಯೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅಲ್ಲದೆ, ಗಡಿನಾಡ ಕನ್ನಡಿಗರನ್ನು ಮಹಾರಾಷ್ಟ್ರ ಸರ್ಕಾರ ನಿರ್ಲಕ್ಷ್ಯ ಮಾಡುತ್ತಲೇ ಬಂದಿದೆ. ಮಹಾರಾಷ್ಟ್ರದ ಸಾಂಗ್ಲಿ, ಸೋಲ್ಲಾಪುರ ಜಿಲ್ಲೆಗಳಲ್ಲಿ ಹೆಚ್ಚಾಗಿ ಕನ್ನಡ ಮಾತೃ ಭಾಷೆಯವರಿದ್ದಾರೆ. ಅವರು ಕನ್ನಡ ಮಾಧ್ಯಮದ ಶಾಲೆಗಳಲ್ಲೇ ವಿದ್ಯಾಭ್ಯಾಸ ಮಾಡುತ್ತಾರೆ. ಅವರಿಗೆ ಯಾವುದೇ ಸೌಲಭ್ಯವನ್ನು ಮಹಾರಾಷ್ಟ್ರ ಸರ್ಕಾರ ನೀಡುತ್ತಿಲ್ಲ. ಇದೀಗ ಶಾಶ್ವತವಾಗಿ ಕನ್ನಡ ಶಾಲೆಗಳನ್ನು ಮೂಲೆಗುಂಪು ಮಾಡಲು ಮುಂದಾಗಿದೆ ಎಂದು ಅಫ್ಸರ್ ಕೊಡ್ಲಿಪೇಟೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿ, ಸೊಲ್ಲಾಪುರ ಜಿಲ್ಲೆಗಳಲ್ಲಿ ಇರುವ 250 ಕ್ಕೂ ಅಧಿಕ ಗ್ರಾಮಗಳಲ್ಲಿ ಜನರು ಮಾತೃ ಭಾಷೆ ಕನ್ನಡವೇ ಆಗಿದೆ. ಇವರೆಲ್ಲಾ ಕನ್ನಡ ಮಾಧ್ಯಮ ಶಾಲೆಗಳಲ್ಲಿಯೇ ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ಹಲವಾರು ಸಮಸ್ಯೆ, ಕಷ್ಟ ಕೋಟಲೆಗಳು ಬಂದರೂ ಅಲ್ಲಿನ ಜನರು ಕನ್ನಡವನ್ನು ಬಿಟ್ಟಿಲ್ಲ. ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ 11 ಕನ್ನಡ ಮಾಧ್ಯಮ ಶಾಲೆಗಳಿಗೆ ಮರಾಠಿ ಮಾಧ್ಯಮದ ಶಿಕ್ಷಕರನ್ನು ಭಾಷಾ ಶಿಕ್ಷಕರೆಂದು ನೇಮಕ ಮಾಡಿ ಆದೇಶ ಜಾರಿ ಮಾಡಲಾಗಿದೆ. ಇದು ಕನ್ನಡ ಶಾಲೆಗಳ ನಿರ್ನಾಮಕ್ಕೆ ಮಾಡಿದ ಷಡ್ಯಂತ್ರವಾಗಿದೆ. ಈ ವಿಚಾರದಲ್ಲಿ ಕರ್ನಾಟಕ ಸರಕಾರ ತುರ್ತಾಗಿ ಇಲ್ಲಿನ ಕನ್ನಡಿಗರ ಪರವಾಗಿ ನಿಲ್ಲಬೇಕಿದೆ. ಮಹಾರಾಷ್ಟ್ರ ಸರ್ಕಾರದ ಜೊತೆಗೆ ಮಾತನಾಡಿ ಈ ಸಮಸ್ಯೆ ಬಗೆ ಹರಿಸಬೇಕಾಗಿದೆ. ಇಲ್ಲವಾದಲ್ಲಿ ಈ ಭಾಗದಲ್ಲಿ ಕನ್ನಡ ಶಾಲೆಗಳು ಹಾಗೂ ಕನ್ನಡ ಭಾಷೆಯೇ ನಶಿಸಿ ಹೋಗುತ್ತವೆ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

Join Whatsapp
Exit mobile version