Home ಟಾಪ್ ಸುದ್ದಿಗಳು ಸರಸ್ವತಿ ಭಾವಚಿತ್ರ ಒದ್ದು ಅವಮಾನಿಸಿದ ವ್ಯಕ್ತಿ ಮುಸ್ಲಿಮನೇ?

ಸರಸ್ವತಿ ಭಾವಚಿತ್ರ ಒದ್ದು ಅವಮಾನಿಸಿದ ವ್ಯಕ್ತಿ ಮುಸ್ಲಿಮನೇ?

► FACT CHECK

ಹೊಸದಿಲ್ಲಿ: ವ್ಯಕ್ತಿಯೊಬ್ಬ ಹಿಂದೂ ದೇವತೆ ಸರಸ್ವತಿಯ ಭಾವಚಿತ್ರವನ್ನು ಕಾಲಿನಿಂದ ಒದ್ದು ಅವಮಾನಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಲಾಗುತ್ತಿದ್ದು, ಸರಸ್ವತಿಯನ್ನು ಅವಮಾನಿಸುತ್ತಿರುವ ವ್ಯಕ್ತಿ ಮುಸ್ಲಿಮ್ ಎಂದು ಹಲವರು ಆರೋಪ ಮಾಡಿದ್ದಾರೆ.

“ನಮ್ಮ ದೇವರು ಸರಸ್ವತಿಯನ್ನು ಕಾಲಿನಿಂದ ಒದ್ದ ಈ ಜಿಹಾದಿಯನ್ನು ಸುಮ್ಮನೇ ಬಿಡಬಾರದು.. ತಮ್ಮ ಧರ್ಮದ ಬಗ್ಗೆ ಮಾತಾಡಿದರೆ “ಸರ್ ತನ್ ಸೇ ಜುದಾ” ಮಾಡುವ ಭಯಉತ್ಪಾದಕರು.. ಆ ದೇವರೇ ಇವನ ಕಾಲನ್ನು ತನ್ ಸೇ ಜುದಾ ಮಾಡುತ್ತಾರೆ..” ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಅದೇ ರೀತಿ ಹಲವರು ಹಿಂದೂ ದೇವತೆಗೆ ಅವಮಾನ ಮಾಡಿದ ವ್ಯಕ್ತಿ ಜಿಹಾದಿ ಎಂದು ನಿಂದಿಸಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದೇ ವಿಡಿಯೋವನ್ನು ಕರ್ನಾಟಕ ಯೋಗಿಜೀ ಅಭಿಮಾನಿ ಬಳಗ ಎಂಬ ಫೇಸ್ಬುಕ್ ಪೇಜ್ ನಲ್ಲೂ ಹಂಚಲಾಗಿದ್ದು, ಮುಸ್ಲಿಂ ವ್ಯಕ್ತಿಯಿಂದ ಸರಸ್ವತಿ ತಾಯಿಯ ಫೋಟೋಗೆ ಅವಮಾನ ಎಂದು ದೂರಲಾಗಿದೆ. ಹಾಗಾದರೆ ಸರಸ್ವತಿಯ ಭಾವಚಿತ್ರವನ್ನು ಕಾಲಿನಿಂದ ಒದ್ದು ಅವಮಾನಿಸಿದ ವ್ಯಕ್ತಿ ಮುಸ್ಲಿಮನೇ?

ವೈರಲ್ ಆಗುತ್ತಿರುವ ವೀಡಿಯೋ ಬಗ್ಗೆ ಫ್ಯಾಕ್ಟ್ ಚೆಕ್ ನಡೆಸಿದ quint ಸಂಸ್ಥೆಯು ವೀಡಿಯೊದಲ್ಲಿರುವ ವ್ಯಕ್ತಿ ಮುಸ್ಲಿಮನಲ್ಲ ಎಂಬ ಸತ್ಯಾಂಶವನ್ನು ಪತ್ತೆ ಹಚ್ಚಿದೆ.

ಈ ಘಟನೆಯು 2022ರ ಡಿಸೆಂಬರ್ 28ರಂದು ಗುಜರಾತಿನಲ್ಲಿ ನಡೆದಿದ್ದು, ಗುಜರಾತ್ ನ ಜಿಲ್ಲೆಯ ಛೋಟೌಡೆಪುರದ ನಸ್ವಾಡಿಯಲ್ಲಿರುವ ಗೆಲೆಸರ್ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕ ಯೋಗೇಶ್ ರಾಥ್ವಾ ಮದ್ಯದ ಅಮಲಿನಲ್ಲಿ ಸರಸ್ವತಿಯ ಭಾವಚಿತ್ರಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಫೋಟೊವನ್ನು ಎಸೆದು ತುಳಿದಿದ್ದಾನೆ ಎಂದು ವರದಿ ಆಗಿದೆ.
ಸರಸ್ವತಿಯ ಭಾವಚಿತ್ರಕ್ಕೆ ಅವಮಾನಿಸಿದ್ದ ಅತಿಥಿ ಶಿಕ್ಷಕ ಯೋಗೇಶ್ ರಾಥ್ವಾನನ್ನು ಶಾಲೆಯ ಆಡಳಿತಾಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದಾರೆ ಎಂದು ಗೊತ್ತಾಗಿದೆ.

Join Whatsapp
Exit mobile version