Home ಟಾಪ್ ಸುದ್ದಿಗಳು ಗಾಯಾಳುವನ್ನು ಆಸ್ಪತ್ರೆಗೆ ಕೊಂಡೊಯ್ಯಲು ನಿರಾಕರಿಸಿದ ಹೊಯ್ಸಳ ಸಿಬ್ಬಂದಿ ವಿರುದ್ಧ ವಿಚಾರಣೆಗೆ ಆದೇಶ

ಗಾಯಾಳುವನ್ನು ಆಸ್ಪತ್ರೆಗೆ ಕೊಂಡೊಯ್ಯಲು ನಿರಾಕರಿಸಿದ ಹೊಯ್ಸಳ ಸಿಬ್ಬಂದಿ ವಿರುದ್ಧ ವಿಚಾರಣೆಗೆ ಆದೇಶ

ಬೆಂಗಳೂರು: ಬೈಕ್‌ನಿಂದ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಒಪ್ಪದ ಹೊಯ್ಸಳ ಸಿಬ್ಬಂದಿ ವಿರುದ್ಧ ವಿಚಾರಣೆ ನಡೆಸಲು ಉತ್ತರ ವಿಭಾಗದ ಡಿಸಿಪಿ ಸೈದುಲ್ಲಾ ಅದಾವತ್‌ ಆದೇಶಿಸಿದ್ದಾರೆ.

ಕಾನೂನು ಕಾಲೇಜು ವಿದ್ಯಾರ್ಥಿ ರಾಹುಲ್ ಗೌಡ ಎಂಬವರು ಸೋಮವಾರ ರಾತ್ರಿ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿ ಹಂಪ್ಸ್‌ ಬಳಿ ಕೆಳಗೆ ಬಿದ್ದಿದ್ದರು.

ರಸ್ತೆ ಮಧ್ಯೆ ಗಂಭೀರ ಗಾಯಗೊಂಡ ರಾಹುಲ್ ಗೌಡರ ಕಿವಿಯ ಬಳಿ ರಕ್ತಸ್ರಾವವಾಗುತ್ತಿದ್ದು, ಅವರಿಗೆ ಬಿದ್ದಲ್ಲಿಂದ ಎದ್ದೇಳಲು ಆಗಿರಲಿಲ್ಲ. ಇದನ್ನು ಗಮನಿಸಿದ ಸ್ಥಳೀಯರು ಹೊಯ್ಸಳ ವಾಹನ ಹಾಗೂ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆಂಬುಲೆನ್ಸ್ ಬರುವುದು ಸ್ವಲ್ಪ ತಡವಾಗಿದ್ದು, ಘಟನಾ ಸ್ಥಳಕ್ಕೆ ಹೊಯ್ಸಳ ವಾಹನ ಬಂದಿತ್ತು. ಆದರೆ ಹೊಯ್ಸಳ ವಾಹನದಲ್ಲಿದ್ದ ಪೊಲೀಸ್ ಸಿಬ್ಬಂದಿ ಸ್ಥಳೀಯರು ಎಷ್ಟೇ ಗೋಗೆರದರೂ ರಾಹುಲ್ ಅವರನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಒಪ್ಪಲಿಲ್ಲ. ಕೊನೆಗೆ ಸಾರ್ವಜನಿಕರೊಬ್ಬರ ಕಾರಿನಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದ್ದು, ಆಕ್ರೋಶ ವ್ಯಕ್ತವಾಗುತ್ತಿದೆ. ಯಶವಂತಪುರ ಸಂಚಾರ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.

ಮಾನವೀಯತೆ ದೃಷ್ಟಿಯಿಂದ ಪೊಲೀಸ್‌ ಸಿಬ್ಬಂದಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಬೇಕಾಗಿತ್ತು. ಘಟನೆ ಕುರಿತು ಹೊಯ್ಸಳ ವಾಹನ ಸಿಬ್ಬಂದಿ ವಿರುದ್ಧ ವಿಚಾರಣೆಗೆ ಆದೇಶಿಸಲಾಗಿದೆ. ವರದಿ ಬಂದ ಬಳಿಕ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆಯಲ್ಲಿ ವಿದ್ಯಾರ್ಥಿ ಚೇತರಿಸಿಕೊಳ್ಳುತ್ತಿದ್ದಾರೆ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ವಿದ್ಯಾರ್ಥಿ ಹೆಲ್ಮೆಟ್ ಧರಿಸಿರಲಿಲ್ಲ. ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು ಎಂದು ಡಿಸಿಪಿ ಸೈದುಲ್ಲಾ ತಿಳಿಸಿದ್ದಾರೆ.

Join Whatsapp
Exit mobile version