ನವದೆಹಲಿ: ಸಿಜೆಐ ಚಂದ್ರಚೂಡ್ ಅವರ ನಿವಾಸಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿರುವ ಬಗ್ಗೆ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಾಧೀಶರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಹಿರಿಯ ವಕೀಲೆ ಮತ್ತು ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್, ಇಂದಿರಾ ಜೈಸಿಂಗ್ ಅವರು ಈ ಕಾರ್ಯಕ್ರಮವನ್ನು ಖಂಡಿಸುವಂತೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್(SCBA)ಗೆ ಒತ್ತಾಯಿಸಿದ್ದಾರೆ.
ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ ಜೈಸಿಂಗ್ ಅವರು, ಇಂತಹ ಸಾರ್ವಜನಿಕ ಪ್ರದರ್ಶನಗಳು ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವಿನ ಗೆರೆಗಳನ್ನು ಮಸುಕುಗೊಳಿಸುತ್ತವೆ ಎಂದು ಪ್ರತಿಪಾದಿಸಿದ್ದಾರೆ.
“ಭಾರತದ ಮುಖ್ಯ ನ್ಯಾಯಮೂರ್ತಿಗಳು ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ಅಧಿಕಾರವನ್ನು ಬೇರ್ಪಡಿಸುವಲ್ಲಿ ರಾಜಿ ಮಾಡಿಕೊಂಡಿದ್ದಾರೆ. ಸಿಜೆಐ ಸ್ವಾತಂತ್ರ್ಯದ ಮೇಲಿನ ಎಲ್ಲಾ ವಿಶ್ವಾಸವನ್ನು ಕಳೆದುಕೊಂಡಿತು. ಸಾರ್ವಜನಿಕವಾಗಿ ಪ್ರದರ್ಶಿಸಲಾದ ಈ ರಾಜಿಯನ್ನು SCBA ಖಂಡಿಸಬೇಕು ” ಎಂದು ಜೈಸಿಂಗ್ ಬರೆದುಕೊಂಡಿದ್ದಾರೆ.
ಇನ್ನು ಪ್ರಧಾನಿಗೆ ಆತಿಥ್ಯ ನೀಡುವ ಸಿಜೆಐ ನಿರ್ಧಾರವನ್ನು ಖಂಡಿಸಿದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು, ಸಿಜೆಐ ನಿವಾಸಕ್ಕೆ ಪ್ರಧಾನಿ ಅವರ ಖಾಸಗಿ ಭೇಟಿಗೆ ಅವಕಾಶ ಮಾಡಿಕೊಟ್ಟಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ಇದು ಕೆಟ್ಟ ಸಂದೇಶವನ್ನು ರವಾನಿಸುತ್ತಿದೆ ಎಂದು ಹೇಳಿದ್ದಾರೆ.
ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಸ್ಪಷ್ಟವಾದ ಪ್ರತ್ಯೇಕತೆಯ ಅಗತ್ಯವನ್ನು ಒತ್ತಿ ಹೇಳಿದ ಭೂಷಣ್, ‘ನ್ಯಾಯಾಧೀಶರ ನೀತಿ ಸಂಹಿತೆ’ಯನ್ನು ಉಲ್ಲೇಖಿಸಿದ್ದಾರೆ. “ಒಬ್ಬ ನ್ಯಾಯಾಧೀಶರು ತಮ್ಮ ಕಚೇರಿಯ ಘನತೆಗೆ ಅನುಗುಣವಾಗಿ ವೈರಾಗ್ಯದ ಮಟ್ಟವನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅವರು ಹೊಂದಿರುವ ಉನ್ನತ ಹುದ್ದೆಗೆ ಮತ್ತು ಆ ಕಚೇರಿಯಲ್ಲಿರುವ ಸಾರ್ವಜನಿಕ ಗೌರವಕ್ಕೆ ತಕ್ಕುದಲ್ಲದ ಯಾವುದೇ ಕಾರ್ಯ ಅಥವಾ ಲೋಪ ಅವರಿಂದ ಆಗಬಾರದು. ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಅಂತರ ಕಾಯ್ದುಕೊಳ್ಳಬೇಕು ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.