ಭ್ರಷ್ಟಾಚಾರ ಆರೋಪ: ವಾಣಿಜ್ಯ ತೆರಿಗೆ ಇಲಾಖೆಯ 18 ಅಧಿಕಾರಿಗಳ ಅಮಾನತು

Prasthutha|

ಬೆಂಗಳೂರು: ಭ್ರಷ್ಟಾಚಾರ ಆರೋಪದಡಿಯಲ್ಲಿ  ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಮೂವರು ಸಹಾಯಕ ಆಯುಕ್ತರು ಸೇರಿದಂತೆ 18 ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ  ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

- Advertisement -

ಲಂಚ ವಸೂಲಿಯಲ್ಲಿ ತೊಡಗಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಪ್ರಾಥಮಿಕ ತನಿಖೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಾಣಿಜ್ಯ ತೆರಿಗೆ ಆಯುಕ್ತೆ ಸಿ ಶಿಖಾ ಹೇಳಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆಯ ಮೈಸೂರು ವಲಯದ ಜಾರಿ ವಿಭಾಗದ ಜಂಟಿ ಆಯುಕ್ತೆ ಎಸ್‌.ಜಿ. ಸವಿತಾ, ಜಾರಿ ವಿಭಾಗದ ಸಹಾಯಕ ಆಯುಕ್ತರಾದ ವಿ. ಉಮಾದೇವಿ (ಚಿಕ್ಕಬಳ್ಳಾಪುರ), ಕೆ.ಜಿ. ಶ್ರೀರಂಗಪ್ಪ (ಚಿತ್ರದುರ್ಗ), ಬಿ.ಎಲ್‌. ಕೇಶವಮೂರ್ತಿ (ಮಡಿಕೇರಿ) ಅಮಾನತುಗೊಂಡಿರುವ ಹಿರಿಯ ಅಧಿಕಾರಿಗಳಾಗಿದ್ದಾರೆ.

- Advertisement -

ಇಲಾಖೆಯ ಜಾರಿ ವಿಭಾಗದ ವಾಣಿಜ್ಯ ತೆರಿಗೆ ಅಧಿಕಾರಿಗಳಾದ ನಳಿನಾಕುಮಾರಿ, ಗಾಯತ್ರಿ ಎನ್‌.ಟಿ. (ಮೈಸೂರು), ಜಯರಾಂ ಎಸ್‌., ಜನಾರ್ದನ್‌ ಆರ್‌., ಅಪ್ಪು ಪೂಜಾರಿ (ಬೆಂಗಳೂರು),  ವಾಣಿಜ್ಯ ತೆರಿಗೆ ನಿರೀಕ್ಷಕರಾದ ಸಿ.ಎನ್‌. ಪಾಟೀಲ್‌ (ಬೆಳಗಾವಿ), ವಾಸುದೇವ್‌ ಎಚ್‌.ಎಸ್‌. (ಮಡಿಕೇರಿ), ಯೋಗಾನಂದ್‌ ಕೆ. (ಮೈಸೂರು), ರಂಗಸ್ವಾಮಿ ಆರ್‌., ವಿಜಯ್‌ಕುಮಾರ್‌ ಜೆ. (ಚಿತ್ರದುರ್ಗ), ಶ್ರೀಧರ್‌ ಎಸ್‌., ದಿನೇಶ್‌ ಎಸ್‌. ಮತ್ತು ಉಮೇಶ್‌ ಆರ್‌. (ಬೆಂಗಳೂರು ಕೇಂದ್ರ ಕಚೇರಿ) ಹಾಗೂ ಮಡಿಕೇರಿಯ ಜಾರಿ ವಿಭಾಗದ ಸಹಾಯಕ ಆಯುಕ್ತರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಧನರಾಜ್‌ ಎಂ.ಕೆ. ಅವರನ್ನೂ ಅಮಾನತು ಮಾಡಲಾಗಿದೆ.

ಉದ್ಯಮಿಗಳು ನೀಡಿದ ದೂರಿನ ಮೇರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತನಿಖೆಗೆ ಆದೇಶಿಸಿದ್ದು, ಒಂದು ವಾರದ ಹಿಂದೆ ಕ್ರಮವನ್ನು ಪ್ರಾರಂಭಿಸಲಾಗಿತ್ತು ಎಂದು ತಿಳಿದುಬಂದಿದೆ.

Join Whatsapp
Exit mobile version