Home ಟಾಪ್ ಸುದ್ದಿಗಳು ಸೆ.27 ರ ಭಾರತ್ ಬಂದ್ ಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಬೆಂಬಲ

ಸೆ.27 ರ ಭಾರತ್ ಬಂದ್ ಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಬೆಂಬಲ

ಬೆಂಗಳೂರು: ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು. ವಿದ್ಯುತ್ ಖಾಸಗೀಕರಣ ನಿಲ್ಲಿಸಬೇಕು. ಅಡುಗೆ ಅನಿಲ, ಇಂಧನ ದರ ಇಳಿಸಬೇಕು ಎಂದು ಒತ್ತಾಯಿಸಿ ಸೆ. 27ರಂದು ಭಾರತ ಬಂದ್ಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ರೈತ ಹೋರಾಟಗಾರರ ಜೊತೆ ಕೇಂದ್ರ ಸರ್ಕಾರ 12 ಬಾರಿ ಸಭೆ ನಡೆಸಿದ್ದರೂ ಯಾವುದೇ ಕ್ರಮ ವಹಿಸಿಲ್ಲ. ಕೇವಲ ನಾಟಕೀಯ ವರ್ತನೆ ತೋರಲಾಗುತ್ತಿದೆ. ಪ್ರಜಾ ಸರ್ಕಾರ ಎನ್ನುವುದನ್ನು ಮರೆತು ಕಂಪನಿಗಳ ಸರ್ಕಾರದ ರೀತಿ ವರ್ತಿಸುತ್ತಿದೆ ಎಂದು ಆರೋಪಿಸಿದರು.


ಲೋಕಸಭಾ ಚುನಾವಣೆಯಲ್ಲಿ 2022ಕ್ಕೆ ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಹೇಳಿ ಯಾವುದೇ ಯೋಜನೆ ರೂಪಿಸದೆ, ರೈತರ ಉತ್ಪಾದನೆ ವೆಚ್ಚವನ್ನು ಏರಿಕೆ ಮಾಡಲಾಗಿದೆ. ಅಗತ್ಯ ಕೃಷಿ ಸಾಮಗ್ರಿಗಳ ಬೆಲೆ ಏರಿಕೆ ಮಾಡಲಾಗಿದೆ. ಅಂಬಾನಿ, ಅದಾನಿಯಂತಹ ಶ್ರೀಮಂತರ ಕೈಗೊಂಬೆಯಾಗಿ ದೇಶವನ್ನು ಖಾಸಗಿವಲಯಕ್ಕೆ ಮಾರಾಟ ಮಾಡಲು ಮುಂದಾಗಿದೆ. ನಾವು ಎಚ್ಚೆತ್ತುಕೊಳ್ಳದಿದ್ದರೆ ರೈತರ ಉತ್ಪನ್ನಗಳಿಗೆ ಕಾರ್ಪೊರೇಟ್ ಕಂಪನಿ ಮಾಲೀಕರೇ ಬೆಲೆ ನಿಗದಿ ಮಾಡುವಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.


ಸರ್ಕಾರಗಳ ರೈತ ವಿರೋಧಿ ಧೋರಣೆ ಖಂಡಿಸಿ ನಡೆಸುವ ಬಂದ್ ಗೆ ನೂರಾರು ರೈತ, ಜನಪರ, ಕಾರ್ಮಿಕ, ದಲಿತ, ವ್ಯಾಪಾರಿ ಸಂಘಟನೆಗಳು ಬೆಂಬಲ ನೀಡಿವೆ. ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನಸಾಮಾನ್ಯರ ಮೇಲೆ ಗದಾಪ್ರಹಾರವನ್ನು ಸರ್ಕಾರ ನಡೆಸಿದೆ. ಹೀಗಾಗಿ, ಎಲ್ಲ ವರ್ಗದವರೂ ಬಂದ್ ಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Join Whatsapp
Exit mobile version