ನವದೆಹಲಿ: ಹರ್ಯಾಣದ ಮಾಜಿ ಕಾಂಗ್ರೆಸ್ ಶಾಸಕರನ್ನು ಬಂಧಿಸಿ, ಅಮಾನವೀಯ ರೀತಿಯಲ್ಲಿ ವಿಚಾರಣೆ ನಡೆಸಿದ್ದಕ್ಕೆ ಸರ್ವೋಚ್ಚ ನ್ಯಾಯಾಲಯ ಇಡಿಗೆ ಛೀಮಾರಿ ಹಾಕಿದೆ. ದರ್ಪ, ಅಹಂಕಾರವನ್ನು ಬಿಟ್ಟು ಕೆಲಸ ನಿರ್ವಹಿಸುವಂತೆ ಕಿವಿಹಿಂಡಿದೆ.
ಜ. ಅಭಯ್.ಎಸ್.ಓಕಾ ಮತ್ತು ಜ.ಆಗಸ್ಟಿನ್ ಜಾರ್ಜ್ ಇದ್ದ ದ್ವಿಪಕ್ಷೀಯ ಪೀಠ, ” ನೀವು ನಡೆಸುವ ವಿಚಾರಣೆಯ ವೈಖರಿಯೇ ಕ್ರಮಬದ್ದವಲ್ಲ, ಅಮಾನವೀಯ ರೀತಿಯಲ್ಲಿ ವಿಚಾರಣೆ ನಡೆಸುತ್ತಿದ್ದೀರಿ. ನಿಮ್ಮ ವಿಚಾರಣೆಯ ಶೈಲಿ ಶಾಕ್ ತರುವಂತದ್ದು” ಎಂದು ಪೀಠ, ಜಾರಿ ನಿರ್ದೇಶನಾಲಯಕ್ಕೆ ಛೀಮಾರಿ ಹಾಕಿದೆ
ಹರ್ಯಾಣದ ಮಾಜಿ ಕಾಂಗ್ರೆಸ್ ಶಾಸಕ ಸುರೇಂದರ್ ಪನ್ವರ್ ಅವರನ್ನು ಮನಿಲಾಂಡ್ರಿಂಗ್ ಕೇಸಿನಲ್ಲಿ ಇಡಿ ಬಂಧಿಸಿತ್ತು. ಅಕ್ರಮ ಗಣಿಗಾರಿಕೆ ಸಂಬಂಧ, ಇಡಿ ಅಧಿಕಾರಿಗಳು ಪನ್ವರ್ ಅವರನ್ನು ಜುಲೈ ತಿಂಗಳಲ್ಲಿ ತಡರಾತ್ರಿ 1.40ಕ್ಕೆ ಬಂಧಿಸಿತ್ತು. ಇದಕ್ಕೂ ಮುನ್ನ, 15 ತಾಸು ಸತತ ವಿಚಾರಣೆಯನ್ನು ನಡೆಸಿ, ನಂತರ ಅರೆಸ್ಟ್ ಮಾಡಿತ್ತು.ಬಂಧನದ ವಿಚಾರಕ್ಕೆ ಸಂಬಂಧಿಸಿದಂತೆ, ಪನ್ವರ್ ಹೈಕೋರ್ಟ್ ಮೆಟ್ಟಲೇರಿದ್ದರು. ಸೆಪ್ಟಂಬರ್ ತಿಂಗಳಲ್ಲಿ, ಪನ್ವರ್ ಅವರ ಬಂಧನ ಕಾನೂನು ಬಾಹಿರವೆಂದು ಜಾಮೀನು ನೀಡಿತ್ತು. ನೀವು ಬೇಕಿದ್ದಲ್ಲಿ, ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ ಎಂದು ಸೂಚಿಸಿತ್ತು.