ಮಂಗಳೂರು: ಉಮ್ರಾ ಯಾತ್ರೆಗೆಂದು ಮಕ್ಕಾ-ಮದೀನಾಕ್ಕೆ ಕರೆದೊಯ್ದ ಟ್ರಾವೆಲ್ಸ್ ನ ಮಾಲಕರು ಯಾತ್ರಾರ್ಥಿಗಳನ್ನು ಅರ್ಧದಲ್ಲೇ ಕೈ ಬಿಟ್ಟಿರುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮುಹಮ್ಮದೀಯಾ ಹಜ್ ಆ್ಯಂಡ್ ಉಮ್ರಾ ಟೂರ್ ಸಂಸ್ಥೆಯ ಮಾಲಕ ಅಶ್ರಫ್ ಸಖಾಫಿ ಪರ್ಪುಂಜ, ಉಮ್ರಾ ಯಾತ್ರಿಕರಿಗೆ ವಂಚನೆ ಆರೋಪ ಪ್ರಕರಣಕ್ಕೆ ನಾನೇ ಹೊಣೆ, ನನ್ನ ತಪ್ಪಿಗೆ ಸಖಾಫಿಗಳನ್ನು, ಎ.ಪಿ ಉಸ್ತಾದರನ್ನು ಎಳೆದು ತರಬೇಡಿ ಎಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಡಿಸೆಂಬರ್ 14 ಕ್ಕೆ ನಾನು ನನ್ನ ಸಂಸ್ಥೆಯ ಹೆಸರಲ್ಲಿ ಕ್ಯಾಲಿಕಟ್ ಏರ್ ಪೋರ್ಟ್ ನಿಂದ 164 ಮಂದಿಯ ಜತೆ ಜಿದ್ದಾ ಏರ್ ಪೋರ್ಟ್ ಗೆ ತೆರಳಿ ಅಲ್ಲಿಂದ ಪವಿತ್ರ ಮಕ್ಕಾಕ್ಕೆ ಉಮ್ರಾ ಮಾಡಲು ತೆರಳಿದ್ದೆ. ಮಕ್ಕದಲ್ಲಿ 10 ದಿನಗಳ ಕಾಲ ತಂಗಿ ಅಲ್ಲಿನ ಆರಾಧನಾ ಕರ್ಮಗಳನ್ನು ಮುಗಿಸಿ ಮದೀನಾಕ್ಕೆ ಹೋಗಿದ್ದು, ಅಲ್ಲಿ ಆರು ದಿನಗಳ ಕಾಲ ತಂಡ ಉಳಿದಿತ್ತು. ಅಲ್ಲಿಂದ ಮರಳುವ ಸಂದರ್ಭದಲ್ಲಿ ಯಾತ್ರಾರ್ಥಿಗಳ ವಾಸ್ತವ್ಯ, ಆಹಾರ ಹಾಗೂ ಹಿಂದಿರುಗಿ ಬರುವ ಟಿಕೆಟ್ ನ ಕಾರ್ಯದಲ್ಲಿ ತಾಂತ್ರಿಕ ಕಾರಣಗಳಿಂದ ಸ್ವಲ್ಪ ವ್ಯತ್ಯಯ ಉಂಟಾಗಿದ್ದು, ಇದರಿಂದ ಯಾತ್ರಾರ್ಥಿಗಳಿಗೆ ಮತ್ತು ಅವರ ಕುಟುಂಬಕ್ಕೆ ತೀವ್ರ ತೊಂದರೆ ಉಂಟಾಗಿದ್ದಾಗಿ ನನಗೆ ಗಮನಕ್ಕೆ ಬಂದಿದೆ. ಇದಕ್ಕಾಗಿ ನಾನು ವಿಷಾದಿಸುತ್ತೇನೆ ಅಂತಹ ಘಟನೆಗಳು ಸಂಭವಿಸಿದ್ದು, ಕೇವಲ ನನ್ನ ವೈಯಕ್ತಿಕ ಬೇಜಾವಾಬ್ದಾರಿಯ ಕಾರಣದಿಂದಲೇ ಹೊರತು ಇದಕ್ಕೆ ಬೇರೆ ಯಾರೂ ಜವಾಬ್ದಾರರಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ‘ಕರ್ನಾಟಕ ಸಖಾಫಿ ಕೌನ್ಸಿಲ್’ ನನ್ನನ್ನು ನೇರವಾಗಿ ಕಚೇರಿಗೆ ಕರೆದು ವಿಚಾರಿಸಿದ್ದು, ನನ್ನಿಂದ ಉಂಟಾದ ಪ್ರಮಾದಗಳನ್ನು ಅವರ ಮುಂದೆ ಒಪ್ಪಿಕೊಂಡಿರುತ್ತೇನೆ. ಮುಂದೆ ಅಂತಹ ಅವ್ಯವಸ್ಥೆಗಳು ನಡೆಯದಂತೆ ಗರಿಷ್ಠ ಎಚ್ಚರ ವಹಿಸುವುದಾಗಿ ಅವರ ಮುಂದೆ ಮಾತು ಕೊಟ್ಟಿರುತ್ತೇನೆ. ನಡೆದು ಹೋಗಿರುವ ಈ ದುರ್ಘಟನೆಗಳಲ್ಲಿ ನಾನು ತೀವ್ರವಾಗಿ ನೊಂದಿದ್ದು ಇದರಿಂದ ಸಂಕಷ್ಟಕಕ್ಕೆ ಒಳಗಾದ ಎಲ್ಲರೊಂದಿಗೂ ನಾನು ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.
ಹಲವು ವ್ಯಕ್ತಿಗಳು ಮರಳಿ ಬರುವ ಟಿಕೆಟ್ ಗಳಿಗೆ ಇತರ ದಾನಿಗಳು ಹಾಗೂ ಸಂಘ ಸಂಸ್ಥೆಗಳನ್ನು ಸಂಪರ್ಕಿಸಿದ್ದು, ಅಂಥವರಿಗೆ ಸದರಿ ಹಣವನ್ನು ಪಾವತಿಸಲು ನಾನು ಬದ್ಧನಾಗಿರುವುದಾಗಿ ಸಂಬಂಧ ಪಟ್ಟವರ ಗಮನಕ್ಕೆ ಕೊಡುತ್ತಿದ್ದೇನೆ. ಈ ವಿಷಯವು ಸಂಪೂರ್ಣವಾಗಿ ನನ್ನ ವೈಯಕ್ತಿಕ ಕಾರ್ಯವಾಗಿದ್ದು, ಇದಕ್ಕೆ ಯಾರೂ ಉಲಮಾ ವರ್ಗವನ್ನಾಗಲೀ, ಸಖಾಫಿ ಸಮೂಹ ವನ್ನಾಗಲೀ, ನಮ್ಮೆಲ್ಲರ ಗುರು ವರ್ಯರಾದ ಸುಲ್ತಾನುಲ್ ಉಲಮಾ ಎ. ಪಿ ಉಸ್ತಾದರನ್ನಾಗಲೀ ಎಳೆದು ತರಬಾರದಾಗಿ ವಿನಂತಿಸಿ ಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.
ಪುತ್ತೂರು ತಾಲೂಕಿನ ಕಬಕದಲ್ಲಿ ಕಚೇರಿಯನ್ನು ಹೊಂದಿರುವ ಈ ಟ್ರಾವೆಲ್ಸ್ ನ ಅಶ್ರಫ್ ಸಖಾಫಿ ಪರ್ಪುಂಜ ಇತರ ಸಹ ಏಜೆನ್ಸಿಗಳ ಮೂಲಕ 160 ಮಂದಿಯನ್ನು ಸುಮಾರು 60-65 ಸಾವಿರ ರೂ.ನಲ್ಲಿ ಉಮ್ರಾ ಯಾತ್ರೆಯ ವ್ಯವಸ್ಥೆ ಕಲ್ಪಿಸುವು ದಾಗಿ ಹೇಳಿ ಮಕ್ಕಾದಿಂದ ಮದೀನಾಕ್ಕೆ ಕರೆದೊಯ್ದು ಬಳಿಕ ವಂಚಿಸಿರುವುದಾಗಿ ದೂರು ದಾಖಲಾಗಿತ್ತು.