Home ಟಾಪ್ ಸುದ್ದಿಗಳು ಉತ್ತರ ಕನ್ನಡ: ಸಂಪೂರ್ಣ ಗ್ಯಾಸ್‌ ಖಾಲಿ ಮಾಡಿ ಟ್ಯಾಂಕರ್‌ ಮೇಲಕ್ಕೆತ್ತುವ ಸಾಹಸ ಯಶಸ್ವಿ

ಉತ್ತರ ಕನ್ನಡ: ಸಂಪೂರ್ಣ ಗ್ಯಾಸ್‌ ಖಾಲಿ ಮಾಡಿ ಟ್ಯಾಂಕರ್‌ ಮೇಲಕ್ಕೆತ್ತುವ ಸಾಹಸ ಯಶಸ್ವಿ

ಅಂಕೋಲಾ: ಶಿರೂರು ಗುಡ್ಡ ಕುಸಿತದ ರಭಸಕ್ಕೆ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಹೆಚ್‌.ಪಿ ಕಂಪನಿಯ ಗ್ಯಾಸ್‌ ಟ್ಯಾಂಕರ್‌ನಿಂದ ಸಂಪೂರ್ಣ ಗ್ಯಾಸ್‌ ಖಾಲಿ ಮಾಡಿ ಟ್ಯಾಂಕರ್‌ ಮೇಲಕ್ಕೆತ್ತುವ ಸಾಹಸದ ಕಾರ್ಯ ಪೂರ್ತಿ ಮುಗಿದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿ ಜನರ ಪ್ರಾಣ ಹಾನಿ ಜೊತೆಗೆ ನಿಲ್ಲಿಸಿದ್ದ ಗ್ಯಾಸ್‌ ತುಂಬಿದ ಟ್ಯಾಂಕರ್‌‌ನ್ನು ಮಣ್ಣು ಗಂಗಾವಳಿ ನದಿಗೆ ದೂಡಿ ಹಾಕಿತ್ತು. ಟ್ಯಾಂಕರ್ ನದಿಯಲ್ಲಿ ತೇಲಿ ಹೋಗುವ ಮೂಲಕ ಸುತ್ತಲಿನ ಜನತೆಯಲ್ಲಿ ಆತಂಕ ಸೃಷ್ಟಿಯಾಗಿತ್ತು. ಗಂಗಾವಳಿ ನದಿಯಿಂದ ಸುಮಾರು 6 ಕಿ.ಮೀವರೆಗೂ ಕೊಚ್ಚಿಕೊಂಡು ಹೋಗಿದ್ದ ಟ್ಯಾಂಕರ್ ಸಗಡಗೇರಿ ಬಳಿ ಸಿಕ್ಕಿಹಾಕಿಕೊಂಡಿತ್ತು. ಟ್ಯಾಂಕರ್‌ನಿಂದ ಗ್ಯಾಸ್‌ ಸೋರಿಕೆಯಾಗುತ್ತಿತ್ತು. ತಕ್ಷಣ ಪರಿಣಿತರು ಆಗಮಿಸಿ ಗ್ಯಾಸ್‌ ಸೋರಿಕೆ ತಡೆಗಟ್ಟಿ ಗ್ಯಾಸ್‌ ಟ್ಯಾಂಕರ್‌ನ್ನು ಹಗ್ಗದಿಂದ ಕಟ್ಟಿ ಮತ್ತೆ ಮುಂದೆ ತೇಲಿ ಹೋಗದಂತೆ ನಿಲ್ಲಿಸಿದ್ದರು.

ಸೋರಿಕೆ ನಡುವೆಯೂ ಅನಿಲ ತುಂಬಿದ ಗ್ಯಾಸ್‌ ಟ್ಯಾಂಕರ್‌ ಸುರಕ್ಷಿತವಾಗಿ ಮೇಲೆತ್ತುವ ಕಾರ್ಯ ದುಸ್ಸಾಹಸ ಎನ್ನುವುದನ್ನು ಮನಗಂಡ ಜಿಲ್ಲಾ ಧಿಕಾರಿ ಲಕ್ಷ್ಮೀ ಪ್ರಿಯಾ ತಜ್ಞರನ್ನು ಕರೆಸಿ ಅಧ್ಯಯನ ನಡೆಸಿದ್ದರು. ತಜ್ಞರ ಸೂಚನೆ ಮೇರೆಗೆ ಗಂಗಾವಳಿ ನದಿಯಲ್ಲಿ ಅನಿಲ ಖಾಲಿ ಮಾಡುವ ಸಾಹಸಕ್ಕೆ ಕೈ ಹಾಕಿದ್ದರು.

ಗುರುವಾರ ಬೆಳಗ್ಗೆ ನದಿ ದಡದಿಂದ 150 ಮೀ. ಹೊರಗಿದ್ದ ಟ್ಯಾಂಕರ್‌ನ್ನು ದಡಕ್ಕೆ ಎಳೆತಂದು ಟ್ಯಾಂಕರ್‌ನಲ್ಲಿದ್ದ ಗ್ಯಾಸ್‌ ನದಿಗೆ ಬಿಡುವ ಕೆಲಸ ಆರಂಭಿಸಿದ್ದರು. ಗುರುವಾರ ಸಂಜೆ ಹೊತ್ತಿಗೆ ಶೇ.40 ಗ್ಯಾಸ್‌ ಖಾಲಿ ಮಾಡಿ ಮತ್ತೆ ಶುಕ್ರವಾರವೂ ಕಾರ್ಯಾಚರಣೆ ಆರಂಭಿಸಿ ಮಧ್ಯಾಹ್ನದ ಹೊತ್ತಿಗೆ ಸಂಪೂರ್ಣ ಗ್ಯಾಸ್‌ ಖಾಲಿ ಮಾಡಲಾಗಿದೆ.

ಗ್ಯಾಸ್‌ ಖಾಲಿಯಾದ ಬಳಿಕ ಟ್ಯಾಂಕರ್‌ನ್ನು ನೀರಿನಿಂದ ದಡದ ಮೇಲೆ ಕ್ರೇನ್‌ ಮೂಲಕ ಎಳೆದು ತರಲಾಯಿತು. ಈ ಮೂಲಕ ಎರಡು ದಿನ ಸಗಡಗೇರಿ ಉಳುವರೆ ಗ್ರಾಮದ ಜನರಲ್ಲಿದ್ದ ಭಯದ ವಾತಾವರಣ ತಿಳಿಗೊಳಿಸಿದರು. ಎರಡು ದಿನ ಮನೆ ಬಿಟ್ಟ ಜನರು ಕೊನೆಗೂ ಶುಕ್ರವಾರ ಸಂಜೆ ನಿಟ್ಟುಸಿರು ಬಿಟ್ಟು ತಮ್ಮ ಮನೆಗೆ ಸೇರಿಕೊಂಡರು. ಎರಡು ದಿನ ನಡೆದ ಗ್ಯಾಸ್‌ ಖಾಲಿ ಮಾಡುವ ಕಾರ್ಯಾಚರಣೆ ಯಶಸ್ವಿಯಾಗಿದೆ.

Join Whatsapp
Exit mobile version