ಅಬುಧಾಬಿ: ಎರಡು ವರ್ಷ ಪ್ರಾಯದ ಭಾರತೀಯ ಮೂಲದ ಬಾಲಕ, ಯುಎಇ ಯಲ್ಲಿ ಬುಧವಾರ ದುಬೈ ಡ್ಯೂಟಿ ಫ್ರೀ ಮಿಲೇನಿಯಮ್ ಡ್ರಾದಲ್ಲಿ 3.67 ಮಿಲಿಯನ್ ದಿರ್ಹಮ್ (7,47,93,283 ರೂ) ಗೆದ್ದು ಅಚ್ಚರಿ ಮೂಡಿಸಿದ್ದಾನೆ.
ಮುಂಬೈ ಮೂಲದ ಕ್ಷಾನ್ ಎಂಬಾತನೇ ಬಹುಮಾನ ಗೆದ್ದ ಪೋರ.
ಯೋಗೀಶ್ ಗೋಲೆ ಮತ್ತು ಧನಶ್ರೀ ಬಂಡಲ್ ದಂಪತಿ ಮಿಲೇನಿಯಮ್ ಮಿಲಿಯನೇರ್ ಕಾಂಟೆಸ್ಟ್ ನಲ್ಲಿ 371 ಸರಣಿಯಲ್ಲಿ ಟಿಕೆಟ್ ಖರೀದಿಸಿದ್ದರು.
ಕ್ಷಾನ್ 6 ತಿಂಗಳ ಮಗುವಾಗಿದ್ದಾಗ ಆತನ ತಂದೆ ಉದ್ಯೋಗ ನಿಮಿತ್ತ ಯುಎಇ ನ ಶಾರ್ಜಾಗೆ ತೆರಳಿದ್ದರು. ಆನ್ ಲೈನ್ ನಲ್ಲಿ ಟ್ರೇಡಿಂಗ್ ನಲ್ಲಿ ಕೆಲಸ ನಿರ್ವಹಿಸುವ ಯೋಗೀಶ್ ಅವರು ತನ್ನ ಮಗ ಕ್ಷಾನ್ ಹೆಸರಿನಲ್ಲಿ ಟಿಕೆಟ್ ಖರೀದಿಸಿದ್ದರು.
ಬುಧವಾರ ಮಿಲಿಯನೇರ್ ಕಾಂಟೆಸ್ಟ್ ನ ಫಲಿತಾಂಶ ಪ್ರಕಟಿಸಲಾಗಿದ್ದು, ಟಿಕೆಟ್ ಸಂಖ್ಯೆ 2033 ಕ್ಕೆ ಬಹುಮಾನ ಬಂದಿದೆ. ಈ ಟಿಕೆಟ್ ಕ್ಷಾನ್ ಹೆಸರಿನಲ್ಲಿತ್ತು.
ಬಹುಮಾನದ ಮೊತ್ತದ ಹೆಚ್ಚಿನ ಭಾಗವನ್ನು ಹೂಡಿಕೆ ಮಾಡಲಾಗುವುದು. ಇನ್ನುಳಿದ ಹಣವನ್ನು ನಿರ್ಗತಿಕರ ಕಲ್ಯಾಣಕ್ಕೆ ಬಳುವುವುದಾಗಿ ಯೋಗೀಶ್ ತಿಳಿಸಿದ್ದಾರೆ.
1999 ರಲ್ಲಿ ಮಿಲೇನಿಯಮ್ ಮಿಲಿಯನೇರ್ ಪ್ರಚಾರದ ಆರಂಭದ ನಂತರ 3.67 ಮಿಲಿಯನ್ ದಿರ್ಹಮ್ ಗೆದ್ದ 184 ನೇ ಭಾರತೀಯ ಪ್ರಜೆಯಾಗಿದ್ದಾರೆ.
ದುಬೈ ಡ್ಯೂಟಿ ಫ್ರೀ ಮಿಲೇನಿಯಮ್ ಮಿಲಿಯನೇರ್ ಟಿಕೆಟ್ ಖರೀದಿದಾರರಲ್ಲಿ ಭಾರತೀಯರು ಅತಿ ಹೆಚ್ಚು.