ಮುಂಬೈ: ಈ ವರ್ಷದ ಜನವರಿ 12ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದ ಮುಂಬೈನ ಅಟಲ್ ಬಿಹಾರಿ ವಾಜಪೇಯಿ ಸೆವ್ರಿ-ನವ ಸೇವಾ ಅಟಲ್ ಸೇತು ಅಥವಾ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (ಹೆಚ್‌ಟಿಹೆಚ್‌ಎಲ್) ಎಂಬ ಹೆಸರಿನ ಸೇತುವೆಯ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.
ಸಂಚಾರಿ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ ಗಲ್ಫ್‌ರೋಝ್ ಮುಜಾವರ್, ನಾವು ರಸ್ತೆ ಬಿರುಕು ಬಿಟ್ಟಿರುವುದನ್ನು ಗಮನಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ನಾನಾ ಪಟೋಲೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಿಂಗಳುಗಳ ಹಿಂದೆಯಷ್ಟೇ ಉದ್ಘಾಟಿಸಿದ್ದ ಅಟಲ್ ಸೇತುವೆಯ ರಸ್ತೆ ಬಿರುಕು ಬಿಟ್ಟಿರುವುದು ಅತ್ಯಂತ ಕಳವಳಕಾರಿಯಾಗಿದೆ. ಹೆಚ್ಚಿನ ಸಂಖ್ಯೆಯ ಬಿರುಕುಗಳು ಪ್ರಯಾಣಿಕರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿವೆ. ಈ ವಿಷಯವು ತುಂಬಾ ಗಂಭೀರವಾಗಿದೆ. ಮಾನ್ಯ ಹೈಕೋರ್ಟ್ ಈ ಬಗ್ಗೆ ತಕ್ಷಣ ಗಮನಹರಿಸಿ ತನಿಖೆ ನಡೆಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.
ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಅಟಲ್ ಸೇತು ಭಾರತದ ಅತಿ ಉದ್ದದ ಸಮುದ್ರ ಸೇತುವೆಯಾಗಿದ್ದು, 21.8 ಕಿಮೀ ಉದ್ದವಿದೆ. ಈ ಪೈಕಿ 16.5 ಕಿಮೀ ರಸ್ತೆ ಸಮುದ್ರದ ಮೇಲಿದೆ. ಲೊಕ ಸಭಾ ಚುನಾವಣೆಯ ಸನಿಹದಲ್ಲಿ ನಟಿ ರಶ್ಮಿಕಾ ಮಂದಣ್ಣ ಇದೇ ಅಟಲ್ ಸೇತುವೆಯನ್ನು ತೋರಿಸಿ ಬಿಜೆಪಿಯ ಅಭಿವೃದ್ಧಿಯನ್ನು ಕೊಂಡಾಡಿದ್ದರು.