ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಹಲವು ವಿಧಾನಸಭಾ ಕ್ಷೇತ್ರದ ಶಾಸಕರು ಸಂಸದರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಹೀಗಾಗಿ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಉಸ್ತುವಾರಿ ಸಮಿತಿಗಳನ್ನ ಕಾಂಗ್ರೆಸ್ ರಚಿಸಿದೆ.
ಚನ್ನಪಟ್ಟಣ ಕ್ಷೇತ್ರಕ್ಕೆ ಸಚಿವ ಚಲುವರಾಯಸ್ವಾಮಿ, ಶಿಗ್ಗಾಂವಿ ಕ್ಷೇತ್ರಕ್ಕೆ ಸಚಿವ ಈಶ್ವರ್ ಖಂಡ್ರೆ, ಸಂಡೂರು ಕ್ಷೇತ್ರಕ್ಕೆ ಸಚಿವ ಜಮೀರ್ ಅಹಮದ್ ಖಾನ್ ಮತ್ತು ಉಡುಪಿ-ದಕ್ಷಿಣ ಕನ್ನಡ ಪರಿಷತ್ ಸ್ಥಾನದ ಉಪ ಚುನಾವಣೆಗೆ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ.
ಚನ್ನಪಟ್ಟಣ ಕೇತ್ರದಿಂದ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದೀಗ, ಸಂಸದರಾದ ಬಳಿಕ ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಇದೀಗ ಸಂಸದರಾಗಿ ಆಯ್ಕೆ ಹಿನ್ನೆಲೆ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಂಡೂರು ಕೇತ್ರದ ಹಾಲಿ ಶಾಸಕರಾಗಿದ್ದ ಇ. ತುಕಾರಾಮ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉಡುಪಿ-ದಕ್ಷಿಣ ಕನ್ನಡ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ವಿಧಾನ ಪರಿಷತ್ ಸ್ಥಾನ ತೆರವಾಗಿತ್ತು.
ಜೂನ್ 25ರಂದು ಉಪ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಜುಲೈ 2 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಜುಲೈ 5 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಜುಲೈ 12 ರಂದು ಬೆಳಿಗ್ಗೆ 9ರಿಂದ ಸಂಜೆ 4 ಗಂಟೆ ವರೆಗೂ ಮತದಾನ ನಡೆಯಲಿದೆ.