ಮಂಗಳೂರು: ನಾಗಾರಾಧನೆಗೆ ತನ್ನ ಸ್ವಂತ ಜಮೀನು ದಾನ ಮಾಡಿದ ಸ್ಪೀಕರ್ ಖಾದರ್

Prasthutha|

ಮಂಗಳೂರು: ಕರ್ನಾಟಕ ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ ಅವರು ನಾಗಾರಾಧನೆಗೆ ಸ್ವಂತ ಭೂಮಿ ಬಿಟ್ಟು ಕೊಟ್ಟಿದ್ದಾರೆ. ತಮ್ಮ ಪಿತ್ರಾರ್ಜಿತ ಸೊತ್ತಾಗಿದ್ದ ಜಾಗವನ್ನು ನಾಗಾರಾಧನೆಗೆ ಬಿಟ್ಟುಕೊಟ್ಟಿದ್ದು ಆ.21ರಂದು ನಾಗರ ಪಂಚಮಿ ದಿನ ಇಲ್ಲಿ ವಿಶೇಷ ಪೂಜೆಗಳು ನಡೆದಿವೆ.

- Advertisement -

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಪುಣಚ ಪರಿಯಾಲ್ತಡ್ಕ ಎಂಬಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಸೇರಿದ ಪಿತ್ರಾರ್ಜಿತ ಜಮೀನು ಇದೆ. ಹಿಂದಿನ ಕಾಲದಲ್ಲಿ ಆ ಜಮೀನಿನ ಜಾಗದಲ್ಲಿ ನಾಗಾರಾಧನೆ ನಡೆಯುತ್ತಿತ್ತು. ಆ ಕಾಲದಲ್ಲಿ ಆ ಜಾಗ ಹಿಂದುಗಳಾದ ದಳವಾಯಿ ಕುಟುಂಬಕ್ಕೆ ಸೇರಿತ್ತು. ಭೂಮಸೂದೆ ಕಾನೂನಿನಲ್ಲಿ ಖಾದರ್ ಕುಟುಂಬದ ಹಿರಿಯರಿಗೆ ಆ ಜಮೀನು ಸಿಕ್ಕಿತ್ತು. ಪಾಲು ಮಾಡುವಾಗ ಅದು ಖಾದರ್ ಅವರ ಪಾಲಿಗೆ ಬಂದಿತ್ತು. ದಳವಾಯಿ ಕುಟುಂಬದ ನಾಗನ ಕಟ್ಟೆ ಅದೇ ಜಮೀನಿನಲ್ಲಿತ್ತು. ದಳವಾಯಿ ಕುಟುಂಬದ ನಾಗಸಾನಿಧ್ಯ ಮುಸ್ಲಿಂ ಧರ್ಮದವರ ಸ್ಥಳದಲ್ಲಿರುವುದರಿಂದ ಅವರು ಬೇರೆ ಕಡೆ ಆರಾಧನೆ ಮಾಡುತ್ತಿದ್ದರು. ಮೂಲಸ್ಥಾನದ ನಾಗಕಟ್ಟೆಯಲ್ಲಿ ಪೂಜೆಯಾಗದೇ ಇರುವುದರಿಂದ ದಳವಾಯಿ ಕುಟುಂಬಕ್ಕೆ ಸಮಸ್ಯೆಗಳು ಕಾಡಲು ಶುರು ಮಾಡಿದವು. ಆಗ ಅಷ್ಟಮಂಗಳ ಪ್ರಶ್ನೆ ಇಟ್ಟಾಗ ಮೂಲಜಾಗದಲ್ಲಿ ಪೂಜೆ ನಡೆಯಬೇಕೆಂದು ಉತ್ತರ ಸಿಕ್ಕಿತ್ತು.

ಕೊನೆಗೆ ಬೇರೆ ದಾರಿ ಕಾಣದೆ ದಳವಾಯಿ ಕುಟುಂಬ ನಾಗನಕಟ್ಟೆಯ ಆ ಜಾಗದ 10 ಸೆಂಟ್ಸ್ ಸ್ಥಳ ಖರೀದಿಗೆ ಯು.ಟಿ.ಖಾದರ್ ಅವರಿಗೆ ಬೇಡಿಕೆ ಇಟ್ಟಿತು. ಈ ವಿಷಯ ತಿಳಿದ ಖಾದರ್ ಅವರು 10 ಸೆಂಟ್ಸ್ ಗೆ 10 ಸೆಂಟ್ಸ್ ಸೇರಿಸಿ ಒಟ್ಟು 20 ಸೆಂಟ್ಸ್ ಸ್ಥಳವನ್ನು ದಳವಾಯಿ ಕುಟುಂಬಕ್ಕೆ ಉಚಿತವಾಗಿ ಬಿಟ್ಟುಕೊಟ್ಟಿದ್ದಾರೆ. ಸದ್ಯ ಈಗ ಇಲ್ಲಿ ನಾಗಾರಾಧನೆ ನಡೆಯುತ್ತಿದೆ. ನಾಗರ ಪಂಚಮಿಯ ದಿನ ದಳವಾಯಿ ಕುಟುಂಬಿಕರೆಲ್ಲಾ ಸೇರಿ ಪೂಜೆ ಪುನಸ್ಕಾರಗಳನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ.

Join Whatsapp
Exit mobile version