Home Uncategorized ಟ್ವೀಟ್ ಮಾಡಿ ಅಡ್ಡಗೋಡೆ ಮೇಲೆ ದೀಪ ಇಟ್ಟ ಸೌರವ್ ಗಂಗೂಲಿ

ಟ್ವೀಟ್ ಮಾಡಿ ಅಡ್ಡಗೋಡೆ ಮೇಲೆ ದೀಪ ಇಟ್ಟ ಸೌರವ್ ಗಂಗೂಲಿ

ʻಜೀವನದ ಎರಡನೇ ಅಧ್ಯಾಯ ಆರಂಭಿಸುತ್ತಿದ್ದೇನೆ. ಸಾಕಷ್ಟು ಜನರಿಗೆ ನೆರವು ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದ್ದೇನೆʼ ಎಂದು ಟ್ವೀಟ್ ಮಾಡುವ ಮೂಲಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ, ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಮಹತ್ವದ ನಿರ್ಧಾರವೊಂದರ ಸುಳಿವು ನೀಡಿದ್ದಾರೆ.

ಟ್ವೀಟ್ ಬೆನ್ನಲ್ಲೇ ,ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಸೌರವ್ ಗಂಗೂಲಿ ರಾಜ್ಯಸಭೆ ಪ್ರವೇಶ ಮಾಡಲಿದ್ದಾರೆ ಎಂದು ಹೆಚ್ಚಿನ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, “ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಸೌರವ್ ಗಂಗೂಲಿ ಕೆಳಗಿಳಿಯುತ್ತಾರೆ ಎಂಬ ವದಂತಿಯಲ್ಲಿ ಯಾವುದೇ ವಾಸ್ತವಾಂಶವಿಲ್ಲ. ಮಾಧ್ಯಮ ಹಕ್ಕುಗಳ ಬಿಡ್ ಕುರಿತಾದ ವಿಚಾರದಲ್ಲಿ ನಮ್ಮ ಸಹೋದ್ಯೋಗಿಗಳ ಚರ್ಚೆ ನಡೆಯುತ್ತಿದೆ. ಭಾರತೀಯ ಕ್ರಿಕೆಟ್ಅನ್ನು ಮತ್ತಷ್ಟು ಸಧೃಡವಾಗಿಸುವುದರ ಕುರಿತು ನಾವು ಗಮನಹರಿಸಿದ್ದೇವೆʼʼ ಎಂದು ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

“1992ರಲ್ಲಿ ಆರಂಭವಾದ ತಮ್ಮ ಕ್ರಿಕೆಟ್ ವೃತ್ತಿ ಜೀವನ 2022ಕ್ಕೆ 30 ವರ್ಷಗಳನ್ನು ಪೂರ್ತಿಗೊಳಿಸುತ್ತಿದೆ. ಇಷ್ಟು ವರ್ಷಗಳ ಕಾಲ ಕ್ರಿಕೆಟ್ ನನಗೆ ಎಲ್ಲವನ್ನೂ ನೀಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮೆಲ್ಲರ ಬೆಂಬಲವನ್ನು ಪಡೆದಿದ್ದೇನೆ. ಈ ಯಶಸ್ಸಿನ ಪಯಣದ ಎಲ್ಲಾ ಹಂತದಲ್ಲೂ ಜತೆಯಾದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸುತ್ತಿದ್ದೇನೆ. ಸಾಕಷ್ಟು ಜನರಿಗೆ ನೆರವಾಗುವಂಥ ಕೆಲಸವನ್ನು ಮಾಡಲು ಯೋಜನೆಯನ್ನು ರೂಪಿಸುತ್ತಿದ್ದೇನೆ. ಹಾಗಾಗಿ ನನ್ನ ಜೀವನದ ಎರಡನೇ ಅಧ್ಯಾಯದಲ್ಲಿಯೂ ನಿಮ್ಮೆಲ್ಲರ ಬೆಂಬಲ ಹೀಗೆ ಇರಬೇಕೆಂದು ಬಯಸುತ್ತೇನೆʼ ಎಂದು  ಸೌರವ್ ಗಂಗೂಲಿ ಬುಧವಾರ ಸಂಜೆ ʻನಿಗೂಢ ಟ್ವೀಟ್ʼವೊಂದನ್ನು ಮಾಡಿದ್ದರು.

ಕೆಲ ದಿನಗಳ ಹಿಂದೆ ಕೋಲ್ಕತ್ತಾದಲ್ಲಿರುವ ಸೌರವ್ ಗಂಗೂಲಿ ನಿವಾಸಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಈ ವೇಳೆ ಬಿಜೆಪಿ ನಾಯಕರಾದ ಸ್ವಪನ್ ದಾಸ್ ಗುಪ್ತಾ ಮತ್ತು ಅಮಿತ್ ಮಾಳವಿಯಾ ಉಪಸ್ಥಿತರಿದ್ದರು. ಈ ಹಿನ್ನೆಲೆಯಲ್ಲಿ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ತೊರೆದು ಬಿಜೆಪಿ ಪಕ್ಷದ ಮೂಲಕ ರಾಜಕೀಯ ವೃತ್ತಿ ಜೀವನ ಆರಂಭಿಸಲಿದ್ದಾರೆ ಎಂಬ ಸುದ್ದಿಗಳು ಹರಡಿತ್ತು. ಆದರೆ ಈ ಕುರಿತು ಪ್ರತಿಕ್ರಿಯಿಸಿದ್ದ ಭಾರತ ತಂಡದ ಮಾಜಿ ನಾಯಕ ʻ2008ರಲ್ಲಿ ಆಟಗಾರನಾಗಿದ್ದಾಗಿನಿಂದಲೂ ಅಮಿತ್ ಶಾ ಅವರನ್ನು ಚೆನ್ನಾಗಿ ಬಲ್ಲೆ. ಅವರನ್ನು ಸಾಕಷ್ಟು ಬಾರಿ ಭೇಟಿಯಾಗಿದ್ದೇನೆ.  ಹೀಗಾಗಿ ನನ್ನ ಮನೆಗೆ ಬಂದಿದ್ದಾರೆ. ಇದಕ್ಕೆ ಬೇರೆ ರೀತಿಯ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಹೇಳಿದ್ದರು. 

Join Whatsapp
Exit mobile version