Home ಕ್ರೀಡೆ ಹಾಸನ : ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಭೀಕರ ಹತ್ಯೆ

ಹಾಸನ : ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಭೀಕರ ಹತ್ಯೆ

ಹಾಸನ : ಬೈಕ್’ನಲ್ಲಿ ತೆರಳುತ್ತಿದ್ದ ಹಾಲಿ ಹಾಸನ ನಗರಸಭೆ ಜೆಡಿಎಸ್ ಸದಸ್ಯ ಪ್ರಶಾಂತ್ ನಾಗರಾಜ್ (42) ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬುಧವಾರ ಸಂಜೆ ನಡೆದಿದೆ.

ಲಕ್ಷ್ಮಿಪುರ ಬಡಾವಣೆಯ ಜವೇನಹಳ್ಳಿ ಮಠದ ಬಳಿ ದ್ವಿಚಕ್ರವಾಹನದಲ್ಲಿ ಮನೆಕಡೆಗೆ ಹೋಗುವಾಗ ಹಿಂದಿನಿಂದ ಆಟೋದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

ಹಾಸನ ನಗರದ 16 ನೇ ವಾರ್ಡ್‌ನಿಂದ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಪ್ರಶಾಂತ್, ಬುಧವಾರ ಸಂಜೆ ಕೆಲಸ ಮುಗಿಸಿ ತೆರಳುತ್ತಿದ್ದಾಗ ಹತ್ಯೆ ಮಾಡಲಾಗಿದೆ.

ಹಾಸನ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳದಲ್ಲಿ ಪ್ರಶಾಂತ್ ಸ್ನೇಹಿತರು ಹಾಗೂ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಜೆಡಿಎಸ್ ಕಾರ್ಯಕರ್ತರು ಸೇರಿದಂತೆ ಸುತ್ತಮುತ್ತಲ ಬಡಾವಣೆಯ ನಾಗರಿಕರು ಜಮಾಯಿಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಚಿವ ರೇವಣ್ಣ, ಮೃತದೇಹ ಶವಾಗಾರಕ್ಕೆ ಕಳುಹಿಸಲು ಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿದರು.

ಎಎಸ್‌ಪಿ ನಂದಿನಿ ವಿರುದ್ಧ ಗರಂ ಆದ ರೇವಣ್ಣ. ಪಿಎಸ್​ಐ, ಸಿಪಿಐ, ಡಿವೈಎಸ್‌ಪಿಯವರನ್ನು ಅಮಾನತು ಮಾಡಬೇಕು. ಕೃತ್ಯ ಎಸಗಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮಾಜಿ ಸಚಿವ ರೇವಣ್ಣ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದರು.

ಘಟನೆಯ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಪ್ರತಿದಿನ ಬೈಕಿನಲ್ಲಿ ಬರುತ್ತಿದ್ದ ದಾರಿಯನ್ನು ಗಮನಿಸಿಕೊಂಡು ಈ ಹತ್ಯೆ ಮಾಡಲಾಗಿದೆ. ಬೈಕ್‌ಗೆ ಗುದ್ದುವ ಮೂಲಕ ಕೆಳಗೆ ಬೀಳಿಸಿದ ಬಳಿಕ ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿದೆ. ಇದರ ಬಗ್ಗೆ ಈಗಾಗಲೇ ತನಿಖೆ ಕೈಗೆತ್ತಿಕೊಂಡಿದ್ದೇವೆ. ಆದಷ್ಟು ಬೇಗ ಅಪರಾಧಿಗಳನ್ನು ಹಿಡಿಯುತ್ತೇವೆ” ಎಂದು ತಿಳಿಸಿದರು.

Join Whatsapp
Exit mobile version