Home ಕರಾವಳಿ ಮಂಗಳೂರು | ಕಾಂಗ್ರೆಸ್, NSUI ಗೆ ಉತ್ತರ ಕೊಡಲು ಬಿಜೆಪಿ ಕಾರ್ಯಕರ್ತರು ಸಮರ್ಥರಿದ್ದಾರೆ: ನಳಿನ್ ಕುಮಾರ್

ಮಂಗಳೂರು | ಕಾಂಗ್ರೆಸ್, NSUI ಗೆ ಉತ್ತರ ಕೊಡಲು ಬಿಜೆಪಿ ಕಾರ್ಯಕರ್ತರು ಸಮರ್ಥರಿದ್ದಾರೆ: ನಳಿನ್ ಕುಮಾರ್

ಮಂಗಳೂರು: ಶಾಲಾ ಪಠ್ಯಪುಸ್ತಕದಲ್ಲಿ ಆರ್.ಎಸ್.ಎಸ್. ಸಿದ್ಧಾಂತವನ್ನು ಅಳವಡಿಸಲಾಗಿದೆ ಎಂದು ವಿರೋಧಿಸಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿರುವ ಘಟನೆಯನ್ನು, ‘ಕಾಂಗ್ರೆಸ್ ನ ಗೂಂಡಾಗಿರಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರೆದಿದ್ದಾರೆ.

NSUI ವತಿಯಿಂದ ನಡೆದ ಮುತ್ತಿಗೆ ಘಟನೆ ಸಂಬಂಧ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಂಸದ ನಳಿನ್ ಕುಮಾರ್, ಕಾಂಗ್ರೆಸ್ ವೈಚಾರಿಕ ಹೋರಾಟದಲ್ಲಿ ಸೋತಿದೆ. ಹಾಗಾಗಿ ತನ್ನ ಮೂಲ ಸಂಸ್ಕೃತಿ ಗೂಂಡಾಗಿರಿ ಮಾಡುತ್ತಿದೆ. ಅಧಿಕಾರ ಕಳೆದುಕೊಂಡ ಮೇಲೆ ಕಾಂಗ್ರೆಸ್ ಹತಾಶ ಭಾವನೆ ಹೊಂದಿದೆ. ಗಲಭೆ ಸೃಷ್ಟಿ, ಬೆಂಕಿ ಹಚ್ಚುವ ಮತ್ತು ಕಲ್ಲು ತೂರುವ ಪ್ರಕ್ರಿಯೆಗೆ ಕಾಂಗ್ರೆಸ್ ತೊಡಗಿದೆ. ಶಾಸಕ ಅಖಂಡ ಶ್ರೀನಿವಾಸ ಮನೆಗೆ ಅವರದ್ದೇ ಸಂಪತ್ ರಾಜ್ ಬೆಂಕಿ ಹಾಕಿದ್ದರು. ಇದೆಲ್ಲವನ್ನೂ ನೋಡಿದಾಗ ಕಾಂಗ್ರೆಸ್ ನ ಗೂಂಡಾ ಸಂಸ್ಕೃತಿ ‌ಮತ್ತೆ‌ ತಲೆ ಎತ್ತಿದೆ ಅನಿಸುತ್ತಿದೆ ಎಂದರು.

ಪ್ರಜಾಪ್ರಭುತ್ವದಲ್ಲಿ ವಿರೋಧಪಕ್ಷಗಳು ಹೋರಾಟ, ಆಂದೋಲನ ‌ಮಾಡಬಹುದು. ಸಮಂಜಸ ಅಲ್ಲದ ವಿಚಾರದ ವಿರುದ್ದ ಜನಾಂದೋಲನ ಮಾಡುವ ಹಕ್ಕಿದೆ. ಅದು ಬಿಟ್ಟು ವೈಯಕ್ತಿಕ ದ್ವೇಷದ ರಾಜಕಾರಣ ಕಾಂಗ್ರೆಸ್ ಮಾಡಿದೆ. ಒಬ್ಬ ಸಚಿವರ ಮನೆಗೆ ನುಗ್ಗಿ ಬೆಂಕಿ ಹಾಕುವ ಪ್ರಕ್ರಿಯೆ ಆರಂಭಿಸಿದ್ದಾರೆ. ತಕ್ಷಣ ಪೊಲೀಸರು ಅದನ್ನ ನಿಯಂತ್ರಿಸಿದ ಪರಿಣಾಮ ಅನಾಹುತ ತಪ್ಪಿದೆ. ಆ 18 ಕಿಡಿಗೇಡಿಗಳನ್ನ ಬಂಧಿಸಿದ್ದಕ್ಕೆ ಸಿಎಂ ಮತ್ತು ಗೃಹಸಚಿವರಿಗೆ ಅಭಿನಂದಿಸುತ್ತೇನೆ. ಇದೊಂದು ಪಕ್ಕಾ ವ್ಯವಸ್ಥಿತ ಷಡ್ಯಂತ್ರ ಅನಿಸುತ್ತಿದೆ. ಅದರಲ್ಲಿ ಚಿಕ್ಕಮಗಳೂರು, ದಾವಣಗೆರೆ ಸೇರಿ ಬೇರೆ ಭಾಗದವರು ಸೇರಿ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಸೋಲಿನ ಭೀತಿಯಲ್ಲಿದೆ. ಮುಂದಿನ ದಿನಗಳಲ್ಲಿ ಇದನ್ನ ‌ಮುಂದುವರೆಸಿದ್ರೆ ಉತ್ತರ ಕೊಡಲು ನಮ್ಮ ಕಾರ್ಯಕರ್ತರು ಸಮರ್ಥರಿದ್ದಾರೆ ಎಂದರು.

Join Whatsapp
Exit mobile version