ತಿರುವನಂತಪುರಂ: ಖ್ಯಾತ ನಟಿಯೊಬ್ಬರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಲೀಪ್ ಸ್ನೇಹಿತ ಶರತ್ ಜಿ ನಾಯರ್ ರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಪಡಿಸಿದ ಆರೋಪದಡಿ ಪೊಲೀಸರು ಶರತ್ ಜಿ ನಾಯರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ನಟ ದಿಲೀಪ್ ಜಾಮೀನು ಪಡೆದ ನಂತರ ಅವರ ಮನೆಗೆ ಶರತ್ ಜಿ ನಾಯರ್ ಭೇಟಿ ನೀಡಿದ್ದಾರೆ ಎಂಬ ಚಲನಚಿತ್ರ ನಿರ್ದೇಶಕ ಬಾಲಚಂದ್ರಕುಮಾರ್ ಹೇಳಿಕೆ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ದಿಲೀಪ್ ಅವರು, ನಟಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಸಂಚು ರೂಪಿಸಿದ್ದ ಆಡಿಯೋ ಟಿವಿಗಳಲ್ಲಿ ಪ್ರಸಾರವಾದ ಬಳಿಕ ದಿಲೀಪ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಉದ್ದೇಶಪೂರ್ವಕವಾಗಿ ತನ್ನನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿಸಲು ತನಿಖಾಧಿಕಾರಿ ಯತ್ನಿಸಿದ್ದಾರೆ ಎಂದು ದಿಲೀಪ್ ಆರೋಪಿಸಿದ್ದರು.
ತಮಿಳು, ತೆಲುಗು, ಮಲಯಾಳಂ, ಮತ್ತು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಖ್ಯಾತಿ ನಟಿಯನ್ನು 2017ರ ಫೆಬ್ರವರಿ 17ರಂದು ರಾತ್ರಿ ವಾಹನದಲ್ಲಿ ಅಪಹರಿಸಿ ಸುಮಾರು ಎರಡು ಗಂಟೆಗಳ ಕಾಲ ಕಿರುಕುಳ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ ನಟಿಯನ್ನು ಬ್ಲ್ಯಾಕ್ ಮೇಲ್ ಮಾಡುವ ಸಲುವಾಗಿ ಇಡೀ ಕೃತ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿಯಲಾಗಿತ್ತು.
ಈ ಪ್ರಕರಣದಲ್ಲಿ 10 ಮಂದಿ ಶಾಮೀಲಾಗಿದ್ದು, ಅದರಲ್ಲಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ನಂತರ ಆರೋಪಿ ದಿಲೀಪ್‍ರನ್ನು ಬಂಧಿಸಿ ಇದೀಗ ಜಾಮೀನಿನ ಆಧಾರದ ಮೇಲೆ ಬಿಡುಗಡೆಗೊಳಿಸಲಾಗಿದೆ.