Home ಟಾಪ್ ಸುದ್ದಿಗಳು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ನಿವಾಸ, ಕಚೇರಿಗಳ ಮೇಲೆ ಸಿಬಿಐ ದಾಳಿ

ಕಾಂಗ್ರೆಸ್ ನಾಯಕ ಪಿ. ಚಿದಂಬರಂ ನಿವಾಸ, ಕಚೇರಿಗಳ ಮೇಲೆ ಸಿಬಿಐ ದಾಳಿ

ಚೆನ್ನೈ: ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರಿಗೆ ಸಂಬಂಧಿಸಿದ ಬಹು ವಸತಿ ಮತ್ತು ಕಚೇರಿಗಳ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಳಿ ನಡೆಸಿದೆ. ದೆಹಲಿ, ಮುಂಬೈ ಹಾಗೂ ತಮಿಳುನಾಡಿನ ಚೆನ್ನೈ ಮತ್ತು ಶಿವಗಂಗೈನಲ್ಲಿ ಸಿಬಿಐ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದೆ.

ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈ ಮೇಲಿನ ನಗರಗಳ ಏಳು ಕಡೆಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆಯನ್ನು ನಡೆಸಿದೆ. 2010 ಮತ್ತು 14ರ ನಡುವಿನ ವಿದೇಶಿ ವ್ಯವಹಾರಗಳ ಸಂಬಂಧ ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಹೊಸ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ದಾಳಿ ಮಾಡಿದೆ.

ಕಾರ್ತಿ ಚಿದಂಬರಂ

ಕಾರ್ತಿ ಚಿದಂಬರಂ  ವಿರುದ್ಧ ಇರುವುದು ಕೇವಲ ಇದೊಂದು ಪ್ರಕರಣ ಮಾತ್ರವಲ್ಲ. ಹಲವು ಪ್ರಕರಣಗಳಲ್ಲಿ ಇವರ ವಿರುದ್ಧ ತನಿಖೆ ನಡೆಯುತ್ತಿದೆ. ಕಾರ್ತಿ ಅವರು  ತಂದೆ ಪಿ. ಚಿದಂಬರಂ ಹಣಕಾಸು ಸಚಿವರಾಗಿದ್ದ ಸಮಯದಲ್ಲಿ 305 ಕೋಟಿ ರೂ. ಮೊತ್ತದ ವಿದೇಶಿ ಹಣವನ್ನು ಸ್ವೀಕರಿಸುವುದಕ್ಕಾಗಿ ಐಎನ್‌ಎಕ್ಸ್ ಮೀಡಿಯಾಗೆ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ (ಎಫ್‌ಐಪಿಬಿ) ಅನುಮತಿ ನೀಡಿದ ಪ್ರಕರಣವು ಸೇರಿದೆ. ಇದೇ ಪ್ರಕರಣದಲ್ಲಿ ಹಿಂದೊಮ್ಮೆ ಕಾರ್ತಿ ಬಂಧನವಾಗಿದ್ದರು. ಈ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಚಿದಂಬರಂ ನನ್ನ ವಿರುದ್ಧ ಯಾವುದೇ ಆರೋಪಗಳಿಲ್ಲ ಎಂದು ಹೇಳಿದ್ದಾರೆ.

Join Whatsapp
Exit mobile version