ಬೆಂಗಳೂರು: ಹತ್ತು ವರ್ಷ ಅಧಿಕಾರದಲ್ಲಿದ್ದರೂ ಒಂದು ಅಣೆಕಟ್ಟೆಯನ್ನಾಗಲೀ, ಒಂದು ಸಾರ್ವಜನಿಕ ಉದ್ದಿಮೆಯನ್ನಾಗಲೀ ಸ್ಥಾಪಿಸದ ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಆದರೂ ಇದೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ನೆಹರೂ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಬಹುತೇಕ ಅಣೆಕಟ್ಟುಗಳು ನೆಹರೂ ಅವಧಿಯಲ್ಲೇ ನಿರ್ಮಾಣವಾಗಿದೆ. ಕಾಂಗ್ರೆಸ್ ದೇಶಕ್ಕಾಗಿ ಏನೂ ಮಾಡಿಲ್ಲ ಎನ್ನುವುದರಲ್ಲೇ ಕಾಲ ಕಳೆಯುವ ಇವರಿಗೆ ನೆಹರೂ ಕುರಿತು ಮಾತನಾಡುವ ಯೋಗ್ಯತೆಯೇ ಇಲ್ಲ ಸಿಎಂ ಗುಡುಗಿದ್ದಾರೆ.
ನೆಹರೂ ಬ್ರಿಟೀಷರ ವಿರುದ್ಧ ಹೋರಾಡಿ, ಜೈಲು ವಾಸ ಅನುಭವಿಸುತ್ತಿದ್ದಾಗ ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರದವರು ಮೌನ ವಹಿಸಿದ್ದರು. ನೆಪಕ್ಕೂ ಬ್ರಿಟೀಷರ ವಿರುದ್ಧ ಧ್ವನಿ ಎತ್ತದವರು ಇವರು. ಸ್ವಾತಂತ್ರ್ಯ ಹೋರಾಟದ ಚರಿತ್ರೆ ಇರುವ ನಮಗೆ ಈಗ ಇವರು ದೇಶಭಕ್ತಿಯ ಪಾಠ ಮಾಡುತ್ತಾ ನಗೆಪಾಟಲಿಗೀಡಾಗಿದ್ದಾರೆ ಎಂದು ಸಿಎಂ ಹೇಳಿದರಯ
ಮೋದಿಯವರು ಹತಾಶರಾಗಿದ್ದಾರೆ. ಆದ್ದರಿಂದ ವಿಚಿತ್ರವಾಗಿ ಮಾತನಾಡುತ್ತಿದ್ದಾರೆ. ದೇವರೇ ನನ್ನನ್ನು ಕಳುಹಿಸಿದ್ದು ಎಂದು ಹೇಳುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಸೋಲುವುದು ಖಚಿತವಾಗಿದೆ. ಸೋಲಿನ ಭೀತಿಯಿಂದ ಪ್ರಧಾನಿ ಹಾಗೆ ಮಾತನಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.