Home ಕರಾವಳಿ ಹರೀಶ್ ಪೂಂಜಾ ಕಾನೂನು ಪ್ರಕಾರ ನಡೆದುಕೊಳ್ಳದೇ ಇದ್ದರೆ ವಶಕ್ಕೆ ಪಡೆಯುತ್ತೇವೆ: ಎಸ್ಪಿ

ಹರೀಶ್ ಪೂಂಜಾ ಕಾನೂನು ಪ್ರಕಾರ ನಡೆದುಕೊಳ್ಳದೇ ಇದ್ದರೆ ವಶಕ್ಕೆ ಪಡೆಯುತ್ತೇವೆ: ಎಸ್ಪಿ

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ವಿರುದ್ಧ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಾಗಿದ್ದು, ಒಂದರಲ್ಲಷ್ಟೇ ಸ್ಟೇಶನ್ ಜಾಮೀನು ನೀಡಲಾಗಿದೆ. ಇನ್ನೊಂದು ಸೆಕ್ಷನ್ 353 ಪ್ರಕಾರದ ಕೇಸು. ಅದನ್ನು ವಿಚಾರಣೆ ಮಾಡಬೇಕಿದೆ. ಏಳು ವರ್ಷ ಶಿಕ್ಷೆಯಾಗಬಲ್ಲ ಕೇಸು ಅದಾಗಿರುವುದರಿಂದ ಠಾಣೆಯಲ್ಲಿ ಜಾಮೀನು ನೀಡುವಂತಿಲ್ಲ. ಅವರು ಕಾನೂನು ಪ್ರಕಾರ ನಡೆದುಕೊಳ್ಳದೇ ಇದ್ದರೆ ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿಂಗ್ ಹೇಳಿದ್ದಾರೆ.

ಧರ್ಮಸ್ಥಳ ಠಾಣೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾನೂನು ಪ್ರಕಾರ ನಾವು ನಡೆದುಕೊಳ್ಳಬೇಕಾಗುತ್ತದೆ. ಅಷ್ಟು ಪೊಲೀಸರನ್ನು ನಿಯೋಜನೆ ಮಾಡಬೇಕಿತ್ತಾ ಎಂಬ ಪ್ರಶ್ನೆಗೆ ಹಾಗೆ ಉತ್ತರ ನೀಡೋಕೆ ಆಗಲ್ಲ. ಅಲ್ಲಿ ಅಷ್ಟೊಂದು ಜನರನ್ನು ಸೇರಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿದ್ದರಿಂದ ಪೊಲೀಸರನ್ನು ನಿಯೋಜನೆ ಮಾಡಬೇಕಾಗಿ ಬಂದಿತ್ತು. ಮೊದಲು ಮೂರು ಜನ ಪೊಲೀಸರು ಹೋಗಿದ್ದಾಗ ಜನ ಸೇರಿಸಿ ಸಮಸ್ಯೆ ತಂದೊಡ್ಡಿದ್ದರು. ಆಗ ಸಹಜವಾಗಿಯೇ ಹೆಚ್ಚುವರಿ ಪೊಲೀಸರನ್ನು ಕರೆಸಬೇಕಾಗಿ ಬಂತು. ಕಾನೂನಿಗೆ ವಿರುದ್ಧವಾಗಿ ಒಂದು ಸಾವಿರ ಜನರನ್ನು ಸೇರಿಸುತ್ತೇವೆ ಎಂದರೆ, ಅದಕ್ಕೆ ತಕ್ಕಂತೆ ನಾವು ನಡೆದುಕೊಳ್ಳಬೇಕಲ್ವಾ ಎಂದರು.

ಬಂಧನ ಮಾಡಬೇಕಾಗುತ್ತಾ ಎಂಬ ಪ್ರಶ್ನೆಗೆ ಅವರು, ಅದು ತನಿಖಾಧಿಕಾರಿಗೆ ಬಿಟ್ಟ ವಿಚಾರ. ಯಾವಾಗ ಬೇಕಾದರೂ ಕರೆಸಿಕೊಳ್ಳುವ ಸ್ವಾತಂತ್ರ್ಯ ಅವರಿಗಿದೆ. ಅಗತ್ಯ ಬಿದ್ದರೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುತ್ತಾರೆ. ಕಾನೂನು ಪ್ರಕಾರವೇ ನಡೆದುಕೊಳ್ಳಬೇಕಾಗುತ್ತದೆ. ತಾನು ನಿರಪರಾಧಿ ಎನ್ನುವುದನ್ನು ಅವರು ಕೋರ್ಟಿಗೇ ಹೇಳಲಿ. ನಾವು ಅಗತ್ಯ ಇರುವ ಸಾಕ್ಷಿಯನ್ನು ಕೋರ್ಟಿಗೆ ಹಾಜರುಪಡಿಸಬೇಕಾಗುತ್ತದೆ ಎಂದು ಎಸ್ಪಿ ಹೇಳಿದರು.

Join Whatsapp
Exit mobile version