Home ಟಾಪ್ ಸುದ್ದಿಗಳು ಭಾರತೀಯರನ್ನು 21 ನೇ ಶತಮಾನದ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸಿದ್ದು ರಾಜೀವ್ ಗಾಂಧಿ: ಸಿಎಂ ಸಿದ್ದರಾಮಯ್ಯ

ಭಾರತೀಯರನ್ನು 21 ನೇ ಶತಮಾನದ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸಿದ್ದು ರಾಜೀವ್ ಗಾಂಧಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಭಾರತೀಯರನ್ನು 21 ನೇ ಶತಮಾನದ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ವಿಧಾನಸೌಧದ ಕನಸು ಕಾಣಲೂ ಅಶಕ್ತರಾಗಿದ್ದ ಜಾತಿಗಳು ಗೆದ್ದು ವಿಧಾನಸಭೆ ಪ್ರವೇಶಿಸುವಂತೆ ಮಾಡಿದ ದೇವರಾಜು ಅರಸರು ಪ್ರಜಾತಂತ್ರದ ರೂವಾರಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೂರದೃಷ್ಟಿಯ ನಾಯಕ ರಾಜೀವ್ ಗಾಂಧಿ ಮತದಾನದ ವಯಸ್ಸನ್ನು 18 ವರ್ಷಕ್ಕೆ ಇಳಿಸಿದರು. ಆ ಮೂಲಕ ಯುವ ಸಮೂಹ ದೇಶದ ಭವಿಷ್ಯ ರೂಪಿಸುವಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಮಹಾನ್ ಜವಾಬ್ದಾರಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.

ದೇಶದ ಎಲ್ಲಾ ರಂಗಗಳಲ್ಲೂ ಯುವ ಸಮೂಹ ಮತ್ತು ಎಲ್ಲಾ ಜಾತಿ, ಜನ ವರ್ಗಗಳ ಪ್ರತಿನಿಧಿಗಳು ಪಾಲ್ಗೊಳ್ಳುವಿಕೆಯ ಮಹಾದ್ವಾರವನ್ನು ತೆರೆದವರು ರಾಜೀವ್ ಗಾಂಧಿ. ಇದಕ್ಕಾಗಿ ಅಧಿಕಾರ ವಿಕೇಂದ್ರೀಕರಣ ಜಾರಿ ಮಾಡಿದರು. ಸಂವಿಧಾನಕ್ಕೆ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ತಂದರು. ಮಹಿಳೆಯರ ರಾಜಕೀಯ ಪ್ರಾತಿನಿಧ್ಯದ ಅವಕಾಶವನ್ನು ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ವಿಸ್ತರಿಸಿದವರು ರಾಜೀವ್ ಗಾಂಧಿ. ಇಂದು ರಾಜಕೀಯ ಕ್ಷೇತ್ರದಲ್ಲಿ ಇರುವ ಮಹಿಳೆಯರೆಲ್ಲರೂ ರಾಜೀವ್ ಗಾಂಧಿ ಅವರನ್ನು ಸ್ಮರಿಸಬೇಕು. ಶೇ50 ಮಹಿಳಾ ಮೀಸಲಾತಿ ಸಾಧ್ಯ ಆಗಿದ್ದು ರಾಜೀವ್ ಗಾಂಧಿ ಅವರಿಂದ ಎನ್ನುವುದನ್ನು ದೇಶದ ಪ್ರತಿಯೊಬ್ಬ ಮಹಿಳೆಯರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ಮಾಹಿತಿ ತಂತ್ರಜ್ಞಾನ ಮತ್ತು ಇಂಟರ್ ನೆಟ್ ವ್ಯವಸ್ಥೆಯಲ್ಲಿ ಭಾರತದಲ್ಲಿ ಕ್ರಾಂತಿ ಮಾಡಿದವರು ರಾಜೀವ್ ಗಾಂಧಿ. ಅವರು ಭವ್ಯ ಭಾರತ ನಿರ್ಮಾಣದ ಮತ್ತು ಸಾಮಾಜಿಕ ನ್ಯಾಯದ ಸಮಾಜವನ್ನು ರೂಪಿಸುವ ಮಹಾನ್ ಕನಸು ಮತ್ತು ಕಾರ್ಯಕ್ರಮಗಳನ್ನು ಇಟ್ಟುಕೊಂಡಿದ್ದರು. ಅವೆಲ್ಲಾ ಜಾರಿ ಮಾಡುತ್ತಿದ್ದ ಹೊತ್ತಲ್ಲೇ ಹುತಾತ್ಮರಾಗಿ ಈ ನೆಲದ ಮಣ್ಣಿನಲ್ಲಿ ತ್ಯಾಗಮಯಿಯಾಗಿ ದಾಖಲಾದರು ಎಂದು ವಿವರಿಸಿದರು.

ದೇಶಕ್ಕಾಗಿ, ದೇಶದ ಸಮಗ್ರತೆಗಾಗಿ ಹೋರಾಟ ಮಾಡಿದ, ತ್ಯಾಗ ಮಾಡಿದ, ಹುತಾತ್ಮರಾದ ಇತಿಹಾಸ, ಚರಿತ್ರೆ ಇರುವುದು ಕಾಂಗ್ರೆಸ್ಸಿಗೆ ಮಾತ್ರ. ಈ ಯಾವ ಚರಿತ್ರೆ ಮತ್ತು ಇತಿಹಾಸ ಬಿಜೆಪಿಗೂ ಇಲ್ಲ. ಸಂಘ ಪರಿವಾರಕ್ಕೂ ಇಲ್ಲ. ಕೇವಲ ಭರ್ಜರಿ ಭಾಷಣ ಮಾಡುವುದರಲ್ಲಿ ಮಾತ್ರ ಬಿಜೆಪಿ ಪರಿವಾರದವರು ನಿಸ್ಸೀಮರು. ದೇಶ ನಿರ್ಮಾಣ ಕ್ರಿಯೆಯಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ಪಾತ್ರ ಏನೇನೂ ಇಲ್ಲ. ಕೇವಲ ಭಾಷಣಗಳಿಂದ ದೇಶ ನಿರ್ಮಾಣ ಸಾಧ್ಯವಿಲ್ಲ ಎಂದರು.

ದೇವರಾಜ ಅರಸು ಅವರಿಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಛಲ ಇತ್ತು. ಹೀಗಾಗಿ ಮಲ ಹೊರುವ ಪದ್ಧತಿ ನಿಲ್ಲಿಸಿದರು. ಜೀತ ವ್ಯವಸ್ಥೆಗೆ ಮುಕ್ತಿ ಹಾಡಿದರು. ಹಿಂದುಳಿದ ಸಮುದಾಯಗಳ ಮೀಸಲಾತಿಗಾಗಿ ಹಾವನೂರು ಆಯೋಗ ರಚಿಸಿದರು. ಉಳುವವನೇ ಭೂ ಒಡೆಯ ಕಾನೂನು ಜಾರಿ ಮಾಡಿದರು.

ಯಾರು ವಿಧಾನಸೌಧದ ಕನಸು ಕಾಣಲೂ ಸಾಧ್ಯ ಇರಲಿಲ್ಲವೂ ಅಂತಹ ಜಾತಿಗಳ ಪ್ರತಿನಿಧಿಗಳು ವಿಧಾನಸೌಧಕ್ಕೆ ಆರಿಸಿ ಬಂದು ಮಂತ್ರಿಗಳಾಗುವ ಹಾಗೆ ಕ್ರಾಂತಿ ಮಾಡಿದವರು ಅರಸು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಜೆ.ಜಾರ್ಜ್, ಮಧು ಬಂಗಾರಪ್ಪ, ಬೋಸ್ ರಾಜ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ , ಮಾಜಿ ಸಚಿವ ಹೆಚ್.ಎಂ.ರೇವಣ್ಣ ಸೇರಿ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Join Whatsapp
Exit mobile version