Home ಟಾಪ್ ಸುದ್ದಿಗಳು ಮೋದಿ ಮತ್ತು ಪೋಪ್ ಫ್ರಾನ್ಸಿಸ್ ಭೇಟಿಯನ್ನು ವ್ಯಂಗ್ಯ ಮಾಡಿ ಕಾಂಗ್ರೆಸ್ ಹಾಕಿದ ಪೋಸ್ಟ್ ಡಿಲೀಟ್

ಮೋದಿ ಮತ್ತು ಪೋಪ್ ಫ್ರಾನ್ಸಿಸ್ ಭೇಟಿಯನ್ನು ವ್ಯಂಗ್ಯ ಮಾಡಿ ಕಾಂಗ್ರೆಸ್ ಹಾಕಿದ ಪೋಸ್ಟ್ ಡಿಲೀಟ್

ನವದೆಹಲಿ: ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪೋಪ್ ಫ್ರಾನ್ಸಿಸ್ ಅವರ ಭೇಟಿಯನ್ನು ಅಣಕಿಸಿ ಕಾಂಗ್ರೆಸ್ ಪಕ್ಷದ ಕೇರಳ ಘಟಕ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದ ಪೋಸ್ಟನ್ನು ಡಿಲೀಟ್ ಮಾಡಲಾಗಿದೆ. ಪೋಸ್ಟಿಗೆ ಬಿಜೆಪಿಯಿಂದ ಆಕ್ರೋಶ ವ್ಯಕ್ತವಾದ ಬಳಿಕ ಕೇರಳ ಕಾಂಗ್ರೆಸ್ ಘಟಕ ತನ್ನ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ.

ಕಾಂಗ್ರೆಸ್ ಮಾಡಿದ ಪೋಸ್ಟ್‌ನಲ್ಲಿ ಪೋಪ್ ಜೊತೆಗಿನ ಪಿಎಂ ಮೋದಿಯ ಫೋಟೋವನ್ನು ಹಾಕಿ “ಅಂತಿಮವಾಗಿ ಪೋಪ್‌ಗೆ ದೇವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು!” ಎಂದು ಬರೆಯಲಾಗಿತ್ತು. ಈ ಹಿಂದೆ ಪ್ರಧಾನಿ ಮೋದಿ ಟ್ವೀಟ್​ ಒಂದರಲ್ಲಿ ಯಾವುದೋ ಒಂದು ಕಾರ್ಯಕ್ಕಾಗಿ ದೇವರೇ ನನ್ನನ್ನು ಕಳುಹಿಸಿದ್ದಾನೆ ಎಂದು ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಲೇವಡಿ ಮಾಡಿ ಪೋಸ್ಟ್ ಮಾಡಿತ್ತು.

ಈ ಪೋಸ್ಟ್ ಅನ್ನು ತೀವ್ರವಾಗಿ ಖಂಡಿಸಿದ ಬಿಜೆಪಿ, ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಮತ್ತು ಪೋಪ್ ಇಬ್ಬರನ್ನೂ ಅವಮಾನಿಸಿದೆ ಎಂದು ಆರೋಪಿಸಿತ್ತು. ಕೇರಳದ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಟ್ವೀಟ್ ಮಾಡಿ, ಇಸ್ಲಾಮಿಸ್ಟ್ ಅಥವಾ ಅರ್ಬನ್ ನಕ್ಸಲರು ನಡೆಸುತ್ತಿರುವ ಕಾಂಗ್ರೆಸ್ ಕೇರಳ ಘಟಕದ ಎಕ್ಸ್​ ಹ್ಯಾಂಡಲ್ ರಾಷ್ಟ್ರೀಯವಾದಿ ನಾಯಕರ ವಿರುದ್ಧ ಅವಹೇಳನಕಾರಿ ಮತ್ತು ಅವಮಾನಕರ ವಿಷಯವನ್ನು ಪೋಸ್ಟ್ ಮಾಡುವುದನ್ನು ಮುಂದುವರೆಸಿದೆ. ಈಗ, ಇದು ಪೋಪ್ ಮತ್ತು ಕ್ರಿಶ್ಚಿಯನ್ ಸಮುದಾಯದವರನ್ನು ಅಪಹಾಸ್ಯ ಮಾಡುವ ಮಟ್ಟಕ್ಕೆ ಇಳಿದಿದೆ ಎಂದಿದ್ದರು.

ಕ್ರೈಸ್ತರಿಗೆ ಯಾವುದೇ ಭಾವನಾತ್ಮಕ ಅಥವಾ ಮಾನಸಿಕ ತೊಂದರೆಯನ್ನು ಉಂಟುಮಾಡಿದ್ದರೆ ಕ್ಷಮೆ ಯಾಚಿಸುವುದಾಗಿಯೂ ಕೇರಳ ಕಾಂಗ್ರೆಸ್ ತಿಳಿಸಿದೆ. ನಮಗೆ ಯಾವುದೇ ಧರ್ಮ ಅಥವಾ ಧಾರ್ಮಿಕ ವ್ಯಕ್ತಿಗಳನ್ನು ಅವಮಾನಿಸುವ ಉದ್ದೇಶವಿಲ್ಲ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಪ್ರಪಂಚದಾದ್ಯಂತ ಕ್ರೈಸ್ತರು ದೇವರಂತೆ ಕಾಣುವ ಪೋಪ್ ಅವರನ್ನು ಅವಮಾನಿಸುವ ಆಲೋಚನೆಯನ್ನು ಯಾವುದೇ ಕಾಂಗ್ರೆಸ್ ಕಾರ್ಯಕರ್ತರು ಮಾಡುವುದಿಲ್ಲ. ಆದರೆ, ನರೇಂದ್ರ ಮೋದಿ ಅವರನ್ನು ಅಣಕಿಸಲು ಕಾಂಗ್ರೆಸ್‌ಗೆ ಯಾವುದೇ ಮುಜುಗರವಿಲ್ಲ ಎಂದು ಕೇರಳ ಕಾಂಗ್ರೆಸ್ ಹೇಳಿದೆ.

Join Whatsapp
Exit mobile version