ನವದೆಹಲಿ: ಜಮ್ಮು- ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ಭೀಕರ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದಾರೆ. ಬಳಿಕ
ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಭಾರತ ಈಗಾಗಲೇ ಹಲವು ಕ್ರಮಗಳನ್ನು ಜಾರಿಗೊಳಿಸಿದೆ.
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಸ್ಥಗಿತವೂ ಸೇರಿದಂತೆ ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿಗಳಿಗೆ 7 ದಿನಗಳೊಳಗೆ ಭಾರತ ಬಿಟ್ಟು ಹೊರಡುವಂತೆ ಸೂಚಿಸಲಾಗಿದೆ. ಜೊತೆಗೆ ಭಾರತದಲ್ಲಿರುವ ಪಾಕಿಸ್ತಾನಿ ಪ್ರವಾಸಿಗರಿಗೂ 48 ಗಂಟೆಗಳಲ್ಲಿ ದೇಶ ಬಿಡುವಂತೆ ಆದೇಶಿಸಲಾಗಿದೆ. ಇದರ ಜೊತೆ ಅಟ್ಟರಿ ವಾಘಾ ಗಡಿಯನ್ನು ಬಂದ್ ಮಾಡಲಾಗಿದೆ. ಹೀಗಿರುವಾಗ ಕಳೆದವರ್ಷ ದೇಶ ಬಿಟ್ಟು ಬಂದು ಭಾರತದಲ್ಲಿ ನೆಲೆಸಿರುವ ಸೀಮಾ ಹೈದರ್ ಕತೆ ಏನು ಎಂಬುದು ಅನೇಕರ ಪ್ರಶ್ನೆಯಾಗಿದೆ.
ನಾಲ್ಕು ಮಕ್ಕಳ ತಾಯಿಯಾಗಿರುವ ಸೀಮಾ ಹೈದರ್, ಭಾರತೀಯ ಮೂಲದ ತನ್ನ ಪ್ರೇಮಿ ಸಚಿನ್ ಜೊತೆ ವಾಸಿಸಲು ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ಸುದ್ದಿಯಾಗಿದ್ದರು. ಈಗ ಮತ್ತೊಮ್ಮೆ ಅವರು ಕೂಡ ಪಾಕಿಸ್ತಾನಕ್ಕೆ ಹಿಂತಿರುಗಬೇಕೇ ಎಂಬ ಚರ್ಚೆ ಆರಂಭವಾಗಿದೆ.
2023 ರಲ್ಲಿ, ಪಾಕಿಸ್ತಾನದ ಸಿಂಧ್ ಪ್ರಾಂತ್ಯದ 32 ವರ್ಷದ ಮಹಿಳೆಯೊಬ್ಬರು ತಮ್ಮ ನಾಲ್ವರು ಮಕ್ಕಳೊಂದಿಗೆ ನೇಪಾಳ ಮೂಲಕ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದರು. ಪಾಕಿಸ್ತಾನಿ ವ್ಯಕ್ತಿಯನ್ನು ವಿವಾಹವಾಗಿದ್ದ ಸೀಮಾ, 2019 ರಲ್ಲಿ ಮೊಬೈಲ್ ಗೇಮ್ ಆಡುವಾಗ ಆನ್‌ಲೈನ್‌ನಲ್ಲಿ ಪರಿಚಯವಾದ ಸಚಿನ್ ಅವರನ್ನು ಭೇಟಿಯಾಗಲು ಮತ್ತು ಅವರನ್ನು ಮದುವೆಯಾಗಲು ತನ್ನ ಪತಿ ಮತ್ತು ಮನೆಯನ್ನು ತೊರೆದಿದ್ದರು.
ಅಕ್ರಮ ಪ್ರವೇಶಕ್ಕಾಗಿ ಈ ಜೋಡಿಯನ್ನು ಬಂಧಿಸಲಾಯಿತು ಆದರೆ ನಂತರ ಬಿಡುಗಡೆ ಮಾಡಲಾಯಿತು. ಅವರು ಪರಸ್ಪರ ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದರು. ಕಳೆದ ತಿಂಗಳು ಅವರಿಗೆ ಒಂದು ಹೆಣ್ಣು ಮಗುವೂ ಜನಿಸಿದೆ. ಸೀಮಾ ಹೈದರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ.
ಒಬ್ಬ ನೆಟ್ಟಿಗರು ಸೀಮಾ ಹೈದರ್ ಅವರನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಿ. ಆಕೆ ಕನಿಷ್ಠ 3 ರಾಷ್ಟ್ರೀಯ ಗಡಿಗಳನ್ನು ದಾಟಿ ಉತ್ತರ ಪ್ರದೇಶ ತಲುಪಲು ಅವಕಾಶ ನೀಡಿದ ಪ್ರತಿಯೊಂದು ಭದ್ರತಾ ಸಂಸ್ಥೆಯನ್ನು ಸಹ ತನಿಖೆ ಮಾಡಿ ಎಂದು ಬರೆದಿದ್ದರೆ, ಮತ್ತೊಬ್ಬರು, ಸರ್ಕಾರ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ಭಾರತದಿಂದ ಹೊರಹೋಗುವಂತೆ ಕೇಳಿದಾಗ, ಸೀಮಾ ಹೈದರ್ ಅವರಿಗೆ ಏಕೆ ಉಳಿಯಲು ಅವಕಾಶ ನೀಡಲಾಗಿದೆ? ಎಂದು ಪ್ರಶ್ನಿಸಿದ್ದಾರೆ.
ಆದಾಗ್ಯೂ, ‘ಮಾನ್ಯ’ ವೀಸಾ ಇಲ್ಲದ ಪಾಕಿಸ್ತಾನಿ ಪ್ರಜೆಗಳು ಎರಡು ದಿನಗಳ ಒಳಗೆ ದೇಶವನ್ನು ತೊರೆಯಬೇಕು ಎಂಬ ಭಾರತ ಸರ್ಕಾರದ ಇತ್ತೀಚಿನ ನಿರ್ಧಾರದೊಂದಿಗೆ, ಸೀಮಾ ಹೈದರ್ ಪಾಕ್ಗೆ ಹೋಗುವ ಬಗ್ಗೆ ಊಹಾಪೋಹಗಳು ಎದ್ದಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.