Home ಟಾಪ್ ಸುದ್ದಿಗಳು ಪಹಲ್ಗಾಮ್ ದಾಳಿ: ಕಾಶ್ಮೀರದ ಮುಸಾಫಿರ್, ಸಮೀರ್ ಸಹಕಾರ ಸ್ಮರಿಸಿದ ಕೇರಳದ ಆರತಿ

ಪಹಲ್ಗಾಮ್ ದಾಳಿ: ಕಾಶ್ಮೀರದ ಮುಸಾಫಿರ್, ಸಮೀರ್ ಸಹಕಾರ ಸ್ಮರಿಸಿದ ಕೇರಳದ ಆರತಿ

0

‘ಇಬ್ಬರು ಸಹೋದರರಿಗೆ ಅಲ್ಲಾಹು ಚೆನ್ನಾಗಿಟ್ಟಿರಲಿ’

ಕೊಚ್ಚಿ: ಜಮ್ಮು- ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಉಗ್ರರ ದಾಳಿಯಲ್ಲಿ ತಂದೆಯನ್ನು ಕಳೆದುಕೊಂಡ ಕೇರಳ ರಾಜ್ಯದ ಕೊಚ್ಚಿ ಮೂಲದ ಆರತಿ ಮೆನನ್‌, ಕಾಶ್ಮೀರದ ಸ್ಥಳೀಯರಾದ ಮುಸಾಫಿರ್ ಹಾಗೂ ಸಮೀರ್ ಎಂಬುವವರ ಸಹಕಾರವನ್ನು ಸ್ಮರಿಸುತ್ತ ಗದ್ಗದಿತರಾಗಿದ್ದಾರೆ.

ಕುಟುಂಬ ಸಮೇತ ಕಾಶ್ಮೀರಕ್ಕೆ ಪ್ರವಾಸ ಹೋಗಿದ್ದ ಎನ್.ರಾಮಚಂದ್ರನ್ ಕುಟುಂಬ, ಮರಳಿದ್ದು ರಾಮಚಂದ್ರನ್ ಅವರ ಮೃತದೇಹದೊಂದಿಗೆ.

‘ಕಾಡಿನ ನಡುವಿನಿಂದ ಗುಂಡಿನ ಸದ್ದು ಕೇಳಿಸಿತು. ಇದು ಉಗ್ರರ ದಾಳಿ ಎಂದು ಮನವರಿಕೆಯಾಯಿತು. ಅಲ್ಲಿದ್ದ ಪ್ರವಾಸಿಗರೆಲ್ಲ ಚೆಲ್ಲಾಪಿಲ್ಲಿಯಾಗಿ ಓಡಿದರು. ನಾವೂ ಓಡಿದೆವು. ತಪ್ಪಿಸಿ ಓಡುತ್ತಿರುವಾಗಲೇ ಒಬ್ಬ ಉಗ್ರ ಎದುರಾಗಿ ತಡೆದ. ಗಾಳಿಯಲ್ಲಿ ಗುಂಡು ಹಾರಿಸಿದಾಗ ನಾವು ನಲುಗಿದೆವು. ಆತ ಅಪ್ಪನಿಗೆ ಗುಂಡಿಕ್ಕಿದ. ನಾನು ಅಪ್ಪನನ್ನು ಅಪ್ಪಿಕೊಳ್ಳಲು ಹೊರಟಾಗ ನನ್ನ ಹಣೆಗೆ ಬಂದೂಕು ಇಟ್ಟ. ನನ್ನ ಮಕ್ಕಳು ಭಯದಿಂದ ಜೋರಾಗಿ ಚೀರಾಡಿದಾಗ ಬಂದೂಕು ತೆಗೆದುಕೊಂಡು ಹೊರಟ’ ಎಂದು ಸಾವಿನ ದವಡೆಯಿಂದ ಪಾರಾಗಿ ಬಂದ ಕ್ಷಣವನ್ನು ಆರತಿ ಸ್ಮರಿಸಿದ್ದಾರೆ.

‘ಶವಾಗಾರದ ಬಳಿಗೆ ನನ್ನನ್ನು ಕರೆದುಕೊಂಡು ಹೋಗಲು ಚಾಲಕ ಮುಸಾಫಿರ್ ಹಾಗೂ ಸಮೀರ್ ನೆರವಾದರು. ರಾತ್ರಿ ಮೂರು ಗಂಟೆಯ ವೇಳೆಗೂ ನಮ್ಮ ಜೊತೆಗಿದ್ದು ನೆರವು ನೀಡಿದರು. ಬೆಳಿಗ್ಗೆ ಆರು ಗಂಟೆಯಾದರೂ ಕೆಲಸ ಕಾರ್ಯಗಳೆಲ್ಲ ಮುಗಿದಿರಲಿಲ್ಲ. ನನ್ನ ತಾಯಿಗೆ ಉಳಿದುಕೊಳ್ಳಲು ಹೋಟೆಲ್ ರೂಮಿನ ವ್ಯವಸ್ಥೆ ಮಾಡಿದರು. ನಾವು ಬುಕ್ ಮಾಡಿರದ ಹೋಟೆಲ್ ನಲ್ಲಿ ಉಚಿತವಾಗಿ ಕೋಣೆ ಕೊಟ್ಟರು. ವಿಮಾನ ನಿಲ್ದಾಣದಲ್ಲಿ ಬೀಳ್ಕೊಡುವಾಗ, ಕಾಶ್ಮೀರದಿಂದ ನನಗೆ ನೀವಿಬ್ಬರು ಸಹೋದರರು ಸಿಕ್ಕಿದ್ದೀರಿ, ಅಲ್ಲಾಹು ನಿಮ್ಮನ್ನು ಚೆನ್ನಾಗಿಟ್ಟಿರಲಿ ಎಂದು ಹೇಳಿ, ಧನ್ಯವಾದ ತಿಳಿಸಿದೆ’ ಎಂದು ಆರತಿ ನೆನಪಿಸಿಕೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version