Home ಜಾಲತಾಣದಿಂದ ನಾಗಮಂಗಲ ಗಲಭೆ ಪೂರ್ವನಿಯೋಜಿತ; RSS, ಬಿಜೆಪಿ, ಜೆಡಿಎಸ್ ಸಂಚು: ಎಂ ಲಕ್ಷ್ಮಣ್ ಗಂಭೀರ ಆರೋಪ

ನಾಗಮಂಗಲ ಗಲಭೆ ಪೂರ್ವನಿಯೋಜಿತ; RSS, ಬಿಜೆಪಿ, ಜೆಡಿಎಸ್ ಸಂಚು: ಎಂ ಲಕ್ಷ್ಮಣ್ ಗಂಭೀರ ಆರೋಪ

►‘ವಿಜಯೇಂದ್ರ, ಅಶೋಕ್ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು’


ಮೈಸೂರು: ಮಂಡ್ಯದ ನಾಗಮಂಗಲದಲ್ಲಿ ನಡೆದ ಗಲಭೆ ಪೂರ್ವನಿಯೋಜಿತ. ಗಲಭೆಗೆ ಆರ್ ಎಸ್ ಎಸ್, ಬಿಜೆಪಿ, ಜೆಡಿಎಸ್ ನವರು ಸಂಚು ಮಾಡಿದ್ದರು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಗಂಭೀರ ಆರೋಪ ಮಾಡಿದ್ದಾರೆ.


ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್ ಎಸ್ ಎಸ್, ಬಿಜೆಪಿ, ಜೆಡಿಎಸ್ ಸಂಚನ್ನು ವಿಫಲಗೊಳಿಸುವಲ್ಲಿ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿದೆ. ನಾಗಮಂಗಲ ಪಟ್ಟಣದಲ್ಲಿ ಗಲಭೆ ಮಾಡಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂದರು.


ಮೊದಲು ಮೈಸೂರಿನಲ್ಲಿ ಕೋಮು ಗಲಭೆಗೆ ಸಂಚು ಹೂಡಿದ್ದರು. ಅಲ್ಲಿ ಅವರ ಪ್ಲ್ಯಾನ್ ವಿಫಲವಾಗಿದೆ. ನಾಗಮಂಗಲದಲ್ಲಿ ನಡೆದ ಕೃತ್ಯದಲ್ಲಿ ಶಾಮೀಲಾಗಿದ್ದು ಯುವಕರು. 20 ಜನ ಹಿಂದೂಗಳು, 30 ಜನ ಮುಸ್ಲಿಮರು ಭಾಗಿಯಾಗಿದ್ದಾರೆ. ಇದು ಆರ್ ಎಸ್ ಎಸ್, ಬಿಜೆಪಿ, ಜೆಡಿಎಸ್ ಪೂರ್ವ ನಿಯೋಜಿತ ಕೃತ್ಯ. ಈ ಕುರಿತು ಗೃಹ ಸಚಿವರು ದಾಖಲೆ ಬಿಡುಗಡೆ ಮಾಡಲಿದ್ದಾರೆ ಎಂದರು.

ನಾಗಮಂಗಲದಲ್ಲಿ ಮಧ್ಯರಾತ್ರಿಯಲ್ಲಿ ಒಂದೂವರೆಗೂ ಮೆರವಣಿಗೆ ಮಾಡಲಾಗಿದೆ. ಪೊಲೀಸರ ಅನುಮತಿಯೂ ಇರಲಿಲ್ಲ. ಮೆರವಣಿಗೆಯಲ್ಲಿದ್ದವರು ಮಸೀದಿಯ ಎದುರಲ್ಲೇ ನಿಂತು ಜೈಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ.‌ ಇದಕ್ಕೆ ಕುಮ್ಮಕ್ಕು ಕೊಟ್ಟವರಾರು, ಇದಕ್ಕೆ ಕಾರಣವಾದವರು ಯಾರು? ಎಂದು ಕೇಳಿದರು.

ಅಲ್ಲಿ ಎರಡೂ ಸಮುದಾಯದವರೂ ಕಲ್ಲು ತೂರಿದ್ದಾರೆ ಹಾಗೂ ಕತ್ತಿ ಹಿಡಿದಿದ್ದಾರೆ. ಮಸೀದಿಯ ಎದುರಿನಲ್ಲೇ‌ ನಿಂತು, ಅಲ್ಲೇ ಪಟಾಕಿ ಸಿಡಿಸಿ ಪ್ರಚೋದಿಸಬೇಕು ಎಂಬ ಪೂರ್ವ ಯೋಜಿತ ಕೃತ್ಯ ಇದಾಗಿತ್ತು ಎಂದು ದೂರಿದರು.

ಎಚ್.ಡಿ. ಕುಮಾರಸ್ವಾಮಿ ಗೆದ್ದಾಗಿನಿಂದ ಮಂಡ್ಯದ ಜನರ ನೆಮ್ಮದಿ ಹಾಳಾಗಿದೆ. ಆ ಜನರು ಮುಂದೆಯೂ, ನೆಮ್ಮದಿಯಿಂದ ಇರುವುದಕ್ಕೆ ಬಿಡುವುದಿಲ್ಲ ಎಂದು ದೂರಿದರು.

ನಾಗಮಂಗಲದಲ್ಲಿ ಲೋಪ ಆಗಿರುವ ಬಗ್ಗೆ ಅಲ್ಲಿನ ಇನ್‌ಸ್ಪೆಕ್ಟರ್ ಅಮಾನತು ಮಾಡಲಾಗಿದೆ. ತಪ್ಪಿತಸ್ಥರು ಯಾವುದೇ ವರ್ಗದವರಾಗಿದ್ದರೂ ಕ್ರಮ ಜರುಗಿಸುತ್ತೇವೆ. ಅದರಲ್ಲಿ ಯಾವುದೇ ಮುಲಾಜಿಲ್ಲ. ದೇಶದಲ್ಲಿರುವ ಎಲ್ಲರೂ ಭಾರತ ಮಾತೆಯ ಮಕ್ಕಳೆ. ಅವರನ್ನು ಧರ್ಮದ ಆಧಾರದ ಮೇಲೆ ವಿಂಗಡಿಸಿ ನೋಡುವ ಕೆಲಸವನ್ನು ‌ಬಿಜೆಪಿಯವರು ಮಾಡಬಾರದು. ಗಣೇಶನ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದರು.


ನಾಗಮಂಗಲಕ್ಕೆ ಹೋಗಿ ಪ್ರಚೋದನಕಾರಿ ಹೇಳಿಕೆ ಕೊಟ್ಟಿದ್ದಾರೆ. ವಿಜಯೇಂದ್ರ, ಅಶೋಕ್ ಒಂದು ಸಮುದಾಯವನ್ನು ಬೈದಿದ್ದಾರೆ. ಇವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಎಂ.ಲಕ್ಷ್ಮಣ ಆಗ್ರಹಿಸಿದರು.

ನಾಗಮಂಗಲಕ್ಕೆ ಮಂಗಳೂರು ಮೊದಲಾದ ಕಡೆಗಳಿಂದ ಬಂದಿರುವ ಆರ್‌ಎಸ್‌ಎಸ್‌ನವರು ಗಲಭೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದರು.

ಕೋಮುವಾದಿ ಪಕ್ಷವಾದ ಬಿಜೆಪಿ ಜೊತೆ ಸೇರಿ ಗೆದ್ದು ಕೇಂದ್ರದಲ್ಲಿ ಸಚಿವರಾಗಿರುವ ಕುಮಾರಸ್ವಾಮಿ ರಾಜ್ಯದಲ್ಲಿ ಕೋಮು ಕಿಚ್ಚು ಹೊತ್ತಿಸುವುದನ್ನು ಬಿಡಬೇಕು. ಅವರ ಪ್ರಯೋಗಗಳಿಗೆ ತಕ್ಕ ಉತ್ತರವನ್ನು ಕೊಡಲಾಗುವುದು ಎಂದರು. ಪಕ್ಷದ ಗ್ರಾಮಾಂತರ ‌ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್ ಕುಮಾರ್ ಇದ್ದರು.

Join Whatsapp
Exit mobile version