ಮೈಸೂರು: ಡಿ.ಕೆ. ಶಿವಕುಮಾರ್ ಅವರಿಗೆ ಈಗಿರುವುದು ಕೊನೆಯ ಅವಕಾಶ. ಈಗ ಮುಖ್ಯಮಂತ್ರಿ ಆಗದಿದ್ದರೆ ಮುಂದೆ ಆಗುವುದಿಲ್ಲ. ಒಪ್ಪಂದವೇ ಆಗಿದ್ದರೆ ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟು ಕೊಡಬೇಕು ಎಂದು ಜೆಡಿಎಸ್ ಶಾಸಕ ಎ.ಮಂಜು ಹೇಳಿದರು.
ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಡಿಕೆಶಿ ಕಾರಣದಿಂದಲೇ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರು ಕಾಂಗ್ರೆಸ್ಗೆ ಮತ ಹಾಕಿದರು. ಈ ಕಾರಣದಿಂದಲೇ ಆ ಪಕ್ಷಕ್ಕೆ 30ರಿಂದ 40 ಸೀಟುಗಳು ಏರಿಕೆಯಾದವು. ನಾವು ಮೋಸ ಹೋದೆವು ಎಂದು ಜನರಿಗೆ ಈಗ ಅರ್ಥವಾಗುತ್ತಿದೆ’ ಎಂದರು.
‘ಕಾಂಗ್ರೆಸ್ ಮಧ್ಯರಾತ್ರಿ 12ಕ್ಕೆ ಹುಟ್ಟಿದ ಪಕ್ಷ. ಅಲ್ಲಿ ರಾತ್ರೋರಾತ್ರಿ ಏನು ಬೇಕಾದರೂ ಬದಲಾಗುತ್ತದೆ. 2013ರಲ್ಲಿ ಇದ್ದಂತಹ ಸಿದ್ದರಾಮಯ್ಯ ಈಗಿಲ್ಲ. ಅವರು ಸಂಪುರ್ಣವಾಗಿ ಬದಲಾಗಿದ್ದಾರೆ. ಕಾಂಗ್ರೆಸ್ನಲ್ಲಿ ಶಾಸಕರಿಂದ ಏನೂ ತೀರ್ಮಾನ ಆಗುವುದಿಲ್ಲ. ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ’ ಎಂದು ಹೇಳಿದರು.
