ಉನ್ನತ ವ್ಯಾಸಂಗ ಹಾಗೂ ಉದ್ಯೋಗಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ಭಾರತೀಯರು ಕೆನಡಾಗೆ ತೆರಳುತ್ತಾರೆ. ಕೆನಡಾ ಕನಸು ಕಾಣುವವರಿಗೆ ಈಗ ಸಂಕಷ್ಟ ಎದುರಾಗಿದೆ.
ಕೆನಡಾ ಸರ್ಕಾರವು ವಿದೇಶಿ ವಿದ್ಯಾರ್ಥಿಗಳಿಗೆ ನೀಡುವ ಅಧ್ಯಯನ ಪರವಾನಗಿಗಳ ಸಂಖ್ಯೆಯನ್ನು ಮತ್ತಷ್ಟು ಕಡಿಮೆ ಮಾಡುತ್ತಿದೆ. ದೇಶದಲ್ಲಿ ತಾತ್ಕಾಲಿಕ ನಿವಾಸಿಗಳ ಸಂಖ್ಯೆಯನ್ನು ಕಡಿತಗೊಳಿಸಲು ಕೆಲಸದ ಪರವಾನಗಿಗಾಗಿ ಅರ್ಹತೆಯನ್ನು ಬಿಗಿಗೊಳಿಸುತ್ತಿದೆ ಎಂದು ಸರ್ಕಾರ ಬುಧವಾರ ತಿಳಿಸಿದೆ.
ನಾವು ಈ ವರ್ಷ ಕಡಿಮೆ ಎಂದರೆ 35% ವಿದೇಶಿ ವಿದ್ಯಾರ್ಥಿಗಳಿಗೆ ಅವಕಾಶವನ್ನು ನೀಡುತ್ತಿದ್ದೇವೆ ಮತ್ತು ಮುಂದಿನ ವರ್ಷ ಮತ್ತೆ 10% ದಷ್ಟು ಕಡಿಮೆಯಾಗಲಿದೆ ಎಂದು ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ಲಿಬರಲ್ ಸರ್ಕಾರವು ಸಾರ್ವಜನಿಕ ಅಭಿಪ್ರಾಯ ಸಮೀಕ್ಷೆಯಲ್ಲಿ ಹಿಂದುಳಿದಿದೆ. ದೇಶದಲ್ಲಿ ಅಂತರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ವಿದೇಶಿ ಕೆಲಸಗಾರರನ್ನು ಒಳಗೊಂಡಂತೆ ತಾತ್ಕಾಲಿಕ ನಿವಾಸಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಅಕ್ಟೋಬರ್, 2025 ರ ನಂತರ ನಡೆಯಲಿರುವ ಫೆಡರಲ್ ಚುನಾವಣೆ ಹಿನ್ನೆಲೆಯಲ್ಲಿ ಕೆನಡಾದ ರಾಜಕೀಯದಲ್ಲಿ ಈ ವಿಷಯವು ಅತ್ಯಂತ ವಿವಾದಾಸ್ಪದವಾಗಿದೆ.
ಬುಧವಾರದಂದು ಘೋಷಿಸಲಾದ ಬದಲಾವಣೆಗಳು 2025 ರಲ್ಲಿ ನೀಡಲಾದ ಅಂತರರಾಷ್ಟ್ರೀಯ ಅಧ್ಯಯನ ಪರವಾನಗಿಗಳ ಸಂಖ್ಯೆಯನ್ನು 437,000 ಕ್ಕೆ ತಗ್ಗಿಸುತ್ತದೆ. ಕೆನಡಾ 2023 ರಲ್ಲಿ 509,390 ಅನುಮತಿಗಳನ್ನು ಅನುಮೋದಿಸಿದೆ, ವಲಸೆ ಇಲಾಖೆಯ ಮಾಹಿತಿಯ ಪ್ರಕಾರ 2024 ರ ಮೊದಲ ಏಳು ತಿಂಗಳಲ್ಲಿ 175,920 ಅನುಮತಿಗಳನ್ನು ನೀಡಲಾಗಿದೆ.