Home ಟಾಪ್ ಸುದ್ದಿಗಳು ಲಾಸ್ ಏಂಜಲೀಸ್ ನಲ್ಲಿ ಭೀಕರ ಸ್ಥಿತಿ: 80 ಕಿ.ಮೀ ವೇಗದಲ್ಲಿ ಗಾಳಿ, ಕಾಳ್ಗಿಚ್ಚು

ಲಾಸ್ ಏಂಜಲೀಸ್ ನಲ್ಲಿ ಭೀಕರ ಸ್ಥಿತಿ: 80 ಕಿ.ಮೀ ವೇಗದಲ್ಲಿ ಗಾಳಿ, ಕಾಳ್ಗಿಚ್ಚು

►ಮೃತರ ಸಂಖ್ಯೆ 24ಕ್ಕೆ ಏರಿಕೆ


ಲಾಸ್ ಏಂಜಲೀಸ್: ಅಮೆರಿಕದ ಲಾಸ್ ಏಂಜಲೀಸ್ ಗೆ ವ್ಯಾಪಿಸಿರುವ ಕಾಳ್ಗಿಚ್ಚು ಹತೋಟಿಗೆ ಬರುತ್ತಿಲ್ಲ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಮೃತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಸಾವಿರಾರು ಮನೆಗಳು ಸುಟ್ಟು ಕರಕಲಾಗಿದ್ದು, ಭಾರಿ ಪ್ರಮಾಣದ ಅರಣ್ಯ ಸುಟ್ಟುಹೋಗಿದೆ.


ಲಾಸ್ ಏಂಜಲೀಸ್ ನಲ್ಲಿ ಸತತ ಆರನೇ ದಿನವೂ ಕಾಡ್ಗಿಚ್ಚು ಮುಂದುವರಿದಿದ್ದು, ಎರಡು ಕಾಡ್ಗಿಚ್ಚುಗಳಲ್ಲಿ ಮೃತರ ಸಂಖ್ಯೆ 24ಕ್ಕೆ ಏರಿದೆ. ಇವುಗಳಲ್ಲಿ ಪಾಲಿಸೇಡ್ಸ್ ನಲ್ಲಿ ಎಂಟು ಮೃತದೇಹಗಳು ಮತ್ತು ಈಟನ್ ವಲಯದಲ್ಲಿ 16 ಮೃತದೇಹಗಳು ಪತ್ತೆಯಾಗಿದೆ.


ಬುಧವಾರದವರೆಗೆ ಕಾಳ್ಗಿಚ್ಚು ಮತ್ತಷ್ಟು ವ್ಯಾಪಿಸುವ ಬಗ್ಗೆ ರಾಷ್ಟ್ರೀಯ ಹವಾಮಾನ ಸೇವೆಯು ರೆಡ್ ಅಲರ್ಟ್ ಘೋಷಿಸಿದೆ. ಗಂಟೆಗೆ 80 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಪರ್ವತಗಳಲ್ಲಿ ಗಾಳಿ ವೇಗ ಗಂಟೆಗೆ 113 ಕಿ.ಮೀ ತಲುಪುತ್ತಿದೆ. ಲಾಸ್ ಏಂಜಲೀಸ್ನಲ್ಲಿ ಮಂಗಳವಾರ ಅತ್ಯಂತ ಅಪಾಯಕಾರಿ ದಿನವಾಗಿರಲಿದೆ ಎಂದು ಹವಾಮಾನ ಸೇವಾ ಕೇಂದ್ರದ ಹವಾಮಾನ ತಜ್ಞ ರಿಚ್ ಥಾಂಪ್ಸನ್ ಹೇಳಿದ್ದಾರೆ.
ಲಾಸ್ ಏಂಜಲೀಸ್ ಕೌಂಟಿಯ ಅಗ್ನಿಶಾಮಕ ಕೇಂದ್ರದ ಮುಖ್ಯಸ್ಥ ಆಂಥೋನಿ ಸಿ ಮರ್ರೋನ್ ಅವರು 70 ಹೆಚ್ಚುವರಿ ನೀರಿನ ಟ್ರಕ್ಗಳು ಆಗಮಿಸಿದ್ದು, ಬೆಂಕಿ ನಂದಿಸಲು ಸಿಬ್ಬಂದಿಗೆ ನೆರವಾಗುತ್ತಿವೆ ಎಂದು ಹೇಳಿದ್ದಾರೆ.


ಕಳೆದ ಎಂಟು ತಿಂಗಳಿಗಿಂತ ಈ ಪ್ರದೇಶದಲ್ಲಿ ಯಾವುದೇ ಗಮನಾರ್ಹ ಮಳೆಯಾಗದ ಕಾರಣ ನಗರದ ಸುತ್ತಮುತ್ತಲಿನ ಪ್ರದೇಶವು ಸಂಪೂರ್ಣ ಒಣಗಿದ್ದು, ಕಾಳ್ಗಿಚ್ಚು ಹಬ್ಬಲು ಕಾರಣವಾಗಿದೆ.

Join Whatsapp
Exit mobile version