Home ಕ್ರೀಡೆ ಏಕದಿನ ತಂಡದ ನಾಯಕತ್ವದಿಂದಲೂ ಕೊಹ್ಲಿ ಔಟ್, ರೋಹಿತ್’ಗೆ ಪಟ್ಟ..!?

ಏಕದಿನ ತಂಡದ ನಾಯಕತ್ವದಿಂದಲೂ ಕೊಹ್ಲಿ ಔಟ್, ರೋಹಿತ್’ಗೆ ಪಟ್ಟ..!?

ನವದೆಹಲಿ : ಐಸಿಸಿ ಟಿ-20 ವಿಶ್ವಕಪ್ ಬಳಿಕ ನಾಯಕ ಬಳಿಕ ಟೀಮ್ ಇಂಡಿಯಾದ ಟಿ-20 ತಂಡದ ನಾಯಕ ಸ್ಥಾನದಿಂದ ಕೊಹ್ಲಿ ಕೆಳಗಿಳಿಯಲಿದ್ದಾರೆ. ಆದರೆ ಬಿಸಿಸಿಐ ಮೂಲಗಳ ಪ್ರಕಾರ ಏಕದಿನ ತಂಡದ ನಾಯಕತ್ವ ಸ್ಥಾನವೂ ಕೊಹ್ಲಿಯ ಕೈತಪ್ಪಲಿದೆ. ಬಿಸಿಸಿಐ ಆಯ್ಕೆ ಸಮಿತಿಯ ಸಭೆಯು ಮುಂದಿನ ವಾರ ನಡೆಯಲಿದ್ದು, ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಧಾರ ಹೊರಬೀಳಲಿದೆ ಎಂದು ‘ಇನ್’ಸೈಡ್ ಸ್ಪೋರ್ಟ್ಸ್’ ವರದಿ ಮಾಡಿದೆ.


ಟಿ-20 ತಂಡದ ನಾಯಕ ಸ್ಥಾನಕ್ಕೆ ಕೊಹ್ಲಿ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಐಸಿಸಿ ಟಿ-20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ನಾಯಕ ಸ್ಥಾನದ ಜವಾಬ್ಧಾರಿ ವಹಿಸಿಕೊಳ್ಳಲಿದ್ದಾರೆ. ಆದರೆ ಎರಡು ಫಾರ್ಮೇಟ್’ಗಳಿಗೆ ಎರಡು ನಾಯಕ ಎಂಬ ಸೂತ್ರವು ಭವಿಷ್ಯದಲ್ಲಿ ಸಮಸ್ಯೆಯಾಗಬಹುದು ಎಂಬ ಕಾರಣದಿಂದ ಟಿ-20 ಜೊತೆಗೆ ಏಕದಿನ ಕ್ರಿಕೆಟ್’ಗೂ ರೋಹಿತ್’ಗೆ ಪಟ್ಟ ಕಟ್ಟಲು ಬಿಸಿಸಿಐ ನಿರ್ಧರಿಸಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ‘ಇನ್’ಸೈಡ್ ಸ್ಪೋರ್ಟ್ಸ್’ ಹೇಳಿದೆ.


ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ಬಳಿಕ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಭಾರತದಲ್ಲಿ ಟಿ-20 ಸರಣಿಯನ್ನಾಡಲಿದೆ. ಮೂರು ಪಂದ್ಯಗಳ ಸರಣಿಯು ನವೆಂಬರ್ 17ರಿಂದ ಜೈಪುರದಲ್ಲಿ ಹಾಗೂ ಮುಂದಿನ ವರ್ಷ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಏಕದಿನ ಸರಣಿಯು ಫೆಬ್ರವರಿ 9ರಿಂದ ಅಹಮದಾಬಾದ್’ನಲ್ಲಿ ಆರಂಭವಾಗಲಿದೆ. ತವರಿನಲ್ಲೇ ನಡೆಯಲಿರುವ ಮುಂದಿನ ಎರಡು ಸರಣಿಗಳಿಗೆ ರೋಹಿತ್ ಶರ್ಮಾ ನೇತೃತ್ವದಲ್ಲೇ ಟೀಮ್ ಇಂಡಿಯಾ ಕಣಕ್ಕಿಳಿಯುವುದು ಬಹುತೇಕ ಖಚಿತ.


ಯುಎಇನಲ್ಲಿ ನಡೆಯುತ್ತಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಕಳಪೆ ಪ್ರದರ್ಶನಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಬಿಸಿಸಿಐ ತಂಡದಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ. 2023ರಲ್ಲಿ ಏಕದಿನ ವಿಶ್ವಕಪ್ ಟೂರ್ನಿಯು ಭಾರತದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್ ಟೂರ್ನಿ ನಡೆಯಲಿದೆ. ತಂಡದಲ್ಲಿ ಸಮತೋಲನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎರಡೂ ಫಾರ್ಮೆಟ್’ಗಳಿಗೆ ಒಬ್ಬನೇ ನಾಯಕ ಎಂಬ ಫಾರ್ಮುಲಾವನ್ನು ಬಿಸಿಸಿಐ ಅಳವಡಿಸಿಕೊಳ್ಳಲಿದೆ.

Join Whatsapp
Exit mobile version