Home ಮೀಟುಗೋಲು ಕರ್ನಾಟಕದಲ್ಲಿ ಉತ್ತರ ಪ್ರದೇಶ ಮಾದರಿಗಾಗಿ ನಾಯಕತ್ವ ಬದಲಾವಣೆ !

ಕರ್ನಾಟಕದಲ್ಲಿ ಉತ್ತರ ಪ್ರದೇಶ ಮಾದರಿಗಾಗಿ ನಾಯಕತ್ವ ಬದಲಾವಣೆ !

ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ವಿಷಯ ಮುನ್ನೆಲೆಗೆ ಬಂದಿದೆ. ಈ ಹಿಂದಿನ ಎಲ್ಲಾ ಬೆಳವಣಿಗೆಗಳಿಗಿಂತ ಈಗ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಸನ್ನಿಹಿತವಾಗಿದೆ ಎಂಬ ಭಾವನೆ ಮೂಡದಿರಲು ಯಾವುದೇ ಸಕಾರಣವಿಲ್ಲ. ಯಡಿಯೂರಪ್ಪ ದೆಹಲಿಗೆ ಭೇಟಿ ನೀಡಿ ಬಂದ ಬಳಿಕವಂತೂ ಈ ಅಭಿಪ್ರಾಯ ದಟ್ಟವಾಗತೊಡಗಿದೆ. ಯಡಿಯೂರಪ್ಪ ಕರ್ನಾಟಕದಲ್ಲಿ ಜನಪ್ರಿಯ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಆದರೂ ಅವರನ್ನು ಬದಲಾಯಿಸುವ ತುರ್ತು ಬಿಜೆಪಿಗೆ ಏಕಿದೆ ಎಂದು ವಿಶ್ಲೇಷಿಸುವಾಗ ಬಿಜೆಪಿಯ ಹಿಡನ್ ಅಜೆಂಡಾಗಳನ್ನು ಯಥಾವತ್ ಜಾರಿಗೆ ಯಡಿಯೂರಪ್ಪ ಸಮ್ಮತಿಸುತ್ತಿಲ್ಲ ಎಂಬುದೇ ಪ್ರಮುಖ ಕಾರಣ ಎಂದು ಬಿಜೆಪಿಯ ವಲಯದಲ್ಲೇ ಮಾತು ಕೇಳಿಬರುತ್ತಿದೆ. ಬಿಜೆಪಿಯ ಬತ್ತಳಿಕೆಯಲ್ಲಿ ಹಲವು ಮುಸ್ಲಿಂ, ಕ್ರೈಸ್ತ ವಿರೋಧಿ ನೀತಿಗಳು, ದಲಿತರು, ಹಿಂದುಳಿದವರ ವಿರುದ್ಧದ ಕೆಲವು ದುಷ್ಟ ಯೋಜನೆಗಳು ಇವೆ. ಇವುಗಳ ಯಥಾವತ್ ಜಾರಿಗೆ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ. ಆದರೆ ಅವರು ಸಮ್ಮತಿಸುತ್ತಿಲ್ಲ.
ವೈಯಕ್ತಿಕವಾಗಿ ಹಿಂದಿನಿಂದಲೂ ಯಡಿಯೂರಪ್ಪ ಯಾವುದೇ ಸಮಾಜದ ಬಗ್ಗೆ ಪೂರ್ವಗ್ರಹ ಪೀಡಿತರಾಗಿ ನಡೆದುಕೊಂಡಿಲ್ಲ. ತಮ್ಮ ಸರ್ಕಾರದ ಯೋಜನೆಗಳನ್ನು ಜಾರಿ ಮಾಡುವಾಗಲೂ ಎಲ್ಲಾ ಸಮುದಾಯವನ್ನು ಗಮನದಲ್ಲಿಟ್ಟುಕೊಂಡಿದ್ದರು. ಇದು ತೀವ್ರ ಹಿಂದುತ್ವವಾದಿಗಳ ಕಣ್ಣು ಕೆಂಪಾಗಿಸಿತ್ತು.


ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನಡೆಸುತ್ತಿರುವ ದುರಾಡಳಿತ ಮತ್ತು ಅಲ್ಪಸಂಖ್ಯಾತ ವಿರೋಧಿ ನೀತಿಗಳನ್ನು ರಾಜ್ಯದಲ್ಲೂ ಜಾರಿಗೆ ತರಬೇಕು ಎಂಬುದು ತೀವ್ರಗಾಮಿ ಹಿಂದುತ್ವ ನಾಯಕರ ಆಲೋಚನೆಯಾಗಿದೆ. ಇದಕ್ಕೆ ಯಡಿಯೂರಪ್ಪ ಅವಕಾಶ ನೀಡುತ್ತಿಲ್ಲ. ಈಗಾಗಲೇ ಜಾರಿಗೆ ತಂದ ಗೋಹತ್ಯೆ ನಿಷೇಧ ಕಾಯ್ದೆಯಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ. ದಲಿತರು, ಅಲ್ಪಸಂಖ್ಯಾತರು ಗೋ ಮಾಂಸ ಸೇವಿಸದಂತೆ ತಡೆಯಬೇಕು ಎಂಬ ದುರಾಲೋಚನೆಯಿಂದ ಈ ಕಾಯ್ದೆ ಜಾರಿಗೆ ತರಲಾಯಿತಾದರೂ ಇದರಿಂದ ರೈತರಿಗೆ ಹೆಚ್ಚಿನ ತೊಂದರೆಯಾಗಿದೆ. ಹಾದಿ ಬೀದಿಗಳಲ್ಲಿ ಬೀಡಾಡಿ ದನಗಳ ಸಂಖ್ಯೆ ಹೆಚ್ಚಾಗಿ ಹಲವು ಸಮಸ್ಯೆ ಉಂಟಾಗಿರುವುದು ಸುಳ್ಳಲ್ಲ. ಯೋಗಿಯ ಹಿಂದುತ್ವ ಕರ್ನಾಟಕದಲ್ಲಿ ಜಾರಿಗೆ ತರಬೇಕು ಎಂಬ ಏಕೈಕ ಉದ್ದೇಶದಿಂದ ಸೌಮ್ಯವಾದಿ ಯಡಿಯೂರಪ್ಪ ಅವರನ್ನು ಬದಲಾಯಿಸಿ ತೀವ್ರ ಹಿಂದುತ್ವವಾದಿ ನಾಯಕ ಅಥವಾ ಹೈಕಮಾಂಡ್ ಹೇಳಿಕೆಗೆ ತಲೆಯಾಡಿಸುವ ನಾಯಕನನ್ನು ಗದ್ದುಗೆಯಲ್ಲಿ ಕೂರಿಸಬೇಕು ಎಂಬುದೇ ನಾಯಕತ್ವ ಬದಲಾವಣೆಯ ಹಿಂದಿರುವ ಕಾರ್ಯಸೂಚಿ. ಇದು ಸ್ವತಃ ಬಿಜೆಪಿ ಹೈಕಮಾಂಡ್ ನ ನಿರ್ಧಾರವೂ ಆಗಿದೆ. ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಅವರೊಂದಿಗೂ ಯಡಿಯೂರಪ್ಪ ಉತ್ತಮ ವೈಯಕ್ತಿಕ ಸಂಬಂಧ ಹೊಂದಿದ್ದಾರೆ. ಅವರು ಕೇಳಿದ ಕ್ಷೇತ್ರಗಳಿಗೆಲ್ಲಾ ಹೆಚ್ಚಿನ ಅನುದಾನವನ್ನೂ ಯಡಿಯೂರಪ್ಪ ನೀಡಿದ್ದಾರೆ. ಇದು ಕೂಡ ಬಿಜೆಪಿಯ ತೀವ್ರವಾದಿ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿತ್ತು. ಸ್ವತಃ ಸಚಿವ ಯೋಗೇಶ್ವರ್ ಹಾಗೂ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಇದನ್ನು ಬಹಿರಂಗವಾಗಿಯೇ ಹೇಳಿದ್ದರು. ಮಾತ್ರವಲ್ಲ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್, ಜಮೀರ್ ಅಹ್ಮದ್ ಅವರೊಂದಿಗೂ ಯಡಿಯೂರಪ್ಪ ಉತ್ತಮ ಸಂಬಂಧ ಹೊಂದಿದ್ದಾರೆ. ಯಡಿಯೂರಪ್ಪ ಇರುವವರೆಗೆ ಆರ್ ಎಸ್ ಎಸ್ ನ ಅಜೆಂಡಾ ಜಾರಿ ಕಷ್ಟ ಎಂಬ ನಿಲುವಿಗೆ ಬಂದ ಬಿಜೆಪಿಯ ತೀವ್ರ ಹಿಂದುತ್ವ ಗುಂಪು, ಹೈಕಮಾಂಡ್ ನ ಸಲಹೆ ಮೇರೆಗೆ ಯಡಿಯೂರಪ್ಪ ಅವರನ್ನು ಬದಲಾಯಿಸುವ ದಾಳ ಉರುಳಿಸಿದೆ. ಉತ್ತರ ಪ್ರದೇಶದಂತೆ ಕರ್ನಾಟಕದಲ್ಲೂ ಯೋಗಿಯಂತಹ ತೀವ್ರ ಹಿಂದುತ್ವ ನಾಯಕನನ್ನು ಮುಖ್ಯಮಂತ್ರಿ ಮಾಡಬೇಕು ಎಂಬುದು ಹೈಕಮಾಂಡ್ ನ ಉದ್ದೇಶವಾಗಿದೆ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ? ಯಡಿಯೂರಪ್ಪ ಹೈಕಮಾಂಡ್ ನ ಸಲಹೆಗೆ ಬದ್ಧರಾಗಿ ಗದ್ದುಗೆಯಿಂದ ನಿರ್ಗಮಿಸುತ್ತಾರೋ ಅಥವಾ ಹಿಂದಿನಂತೆ ಸೆಟೆದು ನಿಲ್ಲುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

Join Whatsapp
Exit mobile version