Home ಟಾಪ್ ಸುದ್ದಿಗಳು ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಚೊಂಬು ಕೊಟ್ಟಿದ್ದಾರೆ: ಸಿಎಂ ಸಿದ್ದರಾಮಯ್ಯ ಆಕ್ರೋಶ

ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಚೊಂಬು ಕೊಟ್ಟಿದ್ದಾರೆ: ಸಿಎಂ ಸಿದ್ದರಾಮಯ್ಯ ಆಕ್ರೋಶ

►‘5 ಜನ ಕೇಂದ್ರ ಮಂತ್ರಿಗಳಿದ್ದರೂ ಬಜೆಟ್ ನಲ್ಲಿ ಕರ್ನಾಟಕಕ್ಕೆ ಏನು ಕೊಟ್ಟಿಲ್ಲ’

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ 2024-25ನೇ ಸಾಲಿನ ಬಜೆಟ್ ನಲ್ಲಿ ಕರ್ನಾಟಕಕ್ಕೆ ಚೊಂಬು ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿಡಿ ಕಾರಿದ್ದಾರೆ.


ಬಿಹಾರ, ಆಂಧ್ರಪ್ರದೇಶ ಬಿಟ್ಟರೆ ಬೇರೆ ರಾಜ್ಯಗಳಿಗೆ ಏನೂ ಇಲ್ಲ. ದೇಶದ ಯಾವುದೇ ರಾಜ್ಯಗಳಿಗೆ ಬಜೆಟ್ ನಲ್ಲಿ ಅನುದಾನ ನೀಡಿಲ್ಲ. ನಿರ್ಮಲಾ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಕರ್ನಾಟಕಕ್ಕೆ ವಿಶೇಷ ಅನುದಾನ ನೀಡುತ್ತಾರೆಂಬ ನಿರೀಕ್ಷೆಯಿತ್ತು. ಆದ್ರೆ, ಕರ್ನಾಟಕಕ್ಕೆ ಯಾವುದೇ ಅನುದಾನ ನೀಡದೆ ನಿರ್ಲಕ್ಷಿಸಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ, ಪೆರಿಫೆರಲ್ ರಿಂಗ್ ರಸ್ತೆಗೆ ಕೇಂದ್ರ ಸರ್ಕಾರ ನಯಾಪೈಸೆ ನೀಡಿಲ್ಲ. ನಿರ್ಮಲಾ ಸೀತಾರಾಮನ್ ಮೇಲಿದ್ದ ನಿರೀಕ್ಷೆ ಸಂಪೂರ್ಣ ಸುಳ್ಳಾಗಿದೆ ಎಂದು ಕಿಡಿಕಾರಿದರು.


ಕೇಂದ್ರದ ಬಜೆಟ್ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರದಲ್ಲಿ ರಾಜ್ಯದ ಐವರು ಸಚಿವರಿದ್ದರೂ ಏನನ್ನೂ ಕೊಟ್ಟಿಲ್ಲ. ರಾಜ್ಯದ ಎಚ್.ಡಿ.ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಸಚಿವರಾಗಿದ್ದಾರೆ. ಕೈಗಾರಿಕಾ ಕ್ಷೇತ್ರ, ರೈಲ್ವೆ ಇಲಾಖೆಗೂ ಏನನ್ನೂ ಕೊಡಲಿಲ್ಲ. ಬಜೆಟ್ ಮೂಲಕ ರೈತರಿಗೆ ಕೇಂದ್ರ ಸರ್ಕಾರ ಪಂಗನಾಮ ಹಾಕಿದೆ. ಒಟ್ಟಾರೆಯಾಗಿ ಇದು ನಿರಾಸದಾಯಕ, ಜನವಿರೋಧಿ ಬಜೆಟ್. ರೈತರು, ಬಡವರು, ಮಹಿಳೆಯರಿಗೆ ಬಹಳ ಅನ್ಯಾಯವಾಗಿದೆ ಎಂದು ವಾಗ್ದಾಳಿ ನಡೆಸಿದರು.


ದಲಿತರ ಬಗ್ಗೆ ಮಾತನಾಡುವ ಇವರು ಅನುದಾನ ಕಡಿಮೆ ಮಾಡಿದ್ದಾರೆ. ಕಳೆದ ಮಧ್ಯಂತರ ಬಜೆಟ್ನಲ್ಲಿ 9409 ಕೋಟಿ ರೂ. ಮೀಸಲಿಟ್ಟಿದ್ರು. ಆದ್ರೆ ಈಗ 6300 ಕೋಟಿ ರೂ. ಮಾತ್ರ ಮೀಸಲಿಟ್ಟಿದ್ದಾರೆ. ಐವರು ಕೇಂದ್ರ ಸಚಿವರಿದ್ದರೂ ರಾಜ್ಯಕ್ಕೆ ಯಾವುದೇ ಪ್ರಯೋಜನ ಆಗಿಲ್ಲ. ಕೈಗಾರಿಕಾ, ರೈಲ್ವೆ ಕೃಷಿ ಕ್ಷೇತ್ರಗಳಿಗೆ ಯಾವುದೆ ಕೊಡುಗೆ ಇಲ್ಲ. ಬಹಳ ದಿನಗಳಿಂದ ರಾಯಚೂರಿಗೆ AIIMS ಆಸ್ಪತ್ರೆ ಕೇಳಿದ್ವಿ, ಕೊಟ್ಟಿಲ್ಲ. ಸಂಪೂರ್ಣ ನಿರಾಶದಾಯಕ ಜನವಿರೋಧಿ ಬಜೆಟ್ ಇದು. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಪಂಗನಾಮ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Join Whatsapp
Exit mobile version