Home Uncategorized ಟ್ವಿಟರ್‌ನಲ್ಲಿ ಮಾಜಿ ಕ್ರಿಕೆಟಿಗರ ʻನನ್ನ ದೇಶ, ನನ್ನ ಸುಂದರ ದೇಶʼ ವ್ಯಾಖ್ಯಾನ ಸಮರ !

ಟ್ವಿಟರ್‌ನಲ್ಲಿ ಮಾಜಿ ಕ್ರಿಕೆಟಿಗರ ʻನನ್ನ ದೇಶ, ನನ್ನ ಸುಂದರ ದೇಶʼ ವ್ಯಾಖ್ಯಾನ ಸಮರ !

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ ಮತ್ತು ಅಮಿತ್ ಮಿಶ್ರಾ ನಡುವೆ ಟ್ವಿಟರ್‌ನಲ್ಲಿ ಜಟಾಪಟಿ ಮುಂದುವರಿದಿದೆ.
ಮಧ್ಯಪ್ರದೇಶ ಮತ್ತು ದೆಹಲಿಯ ಜಹಾಂಗೀರ್‌ಪುರಿಯಲ್ಲಿ ನಡೆದ ಬುಲ್ಡೋಜರ್‌ ಕಾರ್ಯಾಚರಣೆಯು ತೀವ್ರ ವಿವಾದವಾದ ಬೆನ್ನಲ್ಲೇ ಟ್ವೀಟ್‌ ಮಾಡಿದ್ದ ಇರ್ಫಾನ್‌ ಪಠಾಣ್, ‘ನನ್ನ ದೇಶ, ನನ್ನ ಸುಂದರ ದೇಶ, ಭೂಮಿಯ ಮೇಲಿನ ಶ್ರೇಷ್ಠ ದೇಶವಾಗುವ ಸಾಮರ್ಥ್ಯವನ್ನು ಹೊಂದಿದೆ. ಆದರೆ…‘ ಎಂದು ಮಾಜಿ ಆಲ್‌ರೌಂಡರ್ ಅಪೂರ್ಣ ಸಾಲಿನ ಪೋಸ್ಟ್‌ವೊಂದನ್ನು ಪ್ರಕಟಿಸಿದ್ದರು.

ಪಠಾಣ್‌ ಅವರ ಟ್ವೀಟ್‌ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್‌ ಆಗಿತ್ತು. ಬಹಳಷ್ಟು ಮಂದಿ ತಮ್ಮದೇ ಆದ ಅಭಿಪ್ರಾಯಗಳ ಮೂಲಕ ಇರ್ಫಾನ್‌ ಅವರ ಟ್ವೀಟ್‌ ಅನ್ನು ಪೂರ್ತಿಗೊಳಿಸಿದರು.

ಇರ್ಫಾನ್ ಪಠಾಣ್ ಅವರ ಟ್ವೀಟ್‌ಗೆ ತಮ್ಮದೇ ಆದ ಶೈಲಿಯಲ್ಲಿ ಅಭಿಪ್ರಾಯ ಸೇರಿಸಿದ್ದ ಮಾಜಿ ಕ್ರಿಕೆಟರ್‌ ಅಮಿತ್‌ ಮಿಶ್ರಾ, ಪಠಾಣ್‌ ಹೆಸರು ಪ್ರಸ್ತಾಪಿಸದೆಯೇ ತಿರುಗೇಟು ನೀಡಿದ್ದರು. ‘ನನ್ನ ದೇಶ, ನನ್ನ ಸುಂದರ ದೇಶ, ಭೂಮಿಯ ಮೇಲಿನ ಶ್ರೇಷ್ಠ ದೇಶವಾಗುವ ಸಾಮರ್ಥ್ಯ ಹೊಂದಿದೆ. ನಾವು ಅನುಸರಿಸಬೇಕಾದ ಮೊದಲ ಪುಸ್ತಕ ನಮ್ಮ ಸಂವಿಧಾನ ಎಂಬುದನ್ನು ಕೆಲವರು ಅರಿತುಕೊಂಡರೆ ಮಾತ್ರ’ ಎಂದು ಅವರು ಬರೆದುಕೊಂಡಿದ್ದರು.

ಮಿಶ್ರಾ ಅವರ ಪಠಾಣ್‌ ಅವರ ನಡುವಿನ ʻಸುಂದರ ದೇಶದ ವ್ಯಾಖ್ಯಾನ ಇಲ್ಲಿಗೆ ನಿಲ್ಲಲಿಲ್ಲ. ಸಂವಿಧಾನವನ್ನು ಅರಿತುಕೊಂಡರೆ ಎಂಬ ಮಿಶ್ರಾ ಟ್ವೀಟ್‌ಗೆ, ಭಾರತೀಯ ಸಂವಿಧಾನದ ಮುನ್ನುಡಿಯ ಪ್ರತಿಯನ್ನು ಹಂಚಿಕೊಳ್ಳುವ ಮೂಲಕ ಇರ್ಫಾನ್‌ ಪಠಾಣ್ ತಿರುಗೇಟು ಕೊಟ್ಟಿದ್ದಾರೆ. ‘ನಾನು ಯಾವಾಗಲೂ ಇದನ್ನು ಅನುಸರಿಸುತ್ತೇನೆ. ನಮ್ಮ ಸುಂದರ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಇದನ್ನು ಅನುಸರಿಸಲು ನಾನು ಕೋರುತ್ತೇನೆ. ದಯವಿಟ್ಟು ಓದಿ ಮತ್ತು ಮತ್ತೆ ಮತ್ತೆ ಓದಿ’ ಎಂದು ಅವರು ಚಿತ್ರದೊಂದಿಗೆ ಬರೆದುಕೊಂಡಿದ್ದಾರೆ.

Join Whatsapp
Exit mobile version