Home ಟಾಪ್ ಸುದ್ದಿಗಳು ಶ್ವೇತಭವನದ ಮೇಲೆ ದಾಳಿ: ಭಾರತೀಯ ಮೂಲದ ವ್ಯಕ್ತಿಗೆ 8 ವರ್ಷ ಜೈಲು

ಶ್ವೇತಭವನದ ಮೇಲೆ ದಾಳಿ: ಭಾರತೀಯ ಮೂಲದ ವ್ಯಕ್ತಿಗೆ 8 ವರ್ಷ ಜೈಲು

ವಾಷಿಂಗ್ಟನ್: ಶ್ವೇತಭವನದ ಮೇಲೆ ದಾಳಿ ಮಾಡಲು ಯತ್ನಿಸಿದ ಆರೋಪದ ಮೇಲೆ ಗುರುವಾರ ಭಾರತೀಯ ಮೂಲದ ಸಾಯಿ ವರ್ಷಿತ್ ಕಂದುಲಾ (20) ಎಂಬಾತನಿಗೆ ಅಮೆರಿಕದ ನ್ಯಾಯಾಲಯ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

2023 ರ ಮೇ 22 ರಂದು ಸಾಯಿ ವರ್ಷಿತ್‌ ಬಾಡಿಗೆ ಟ್ರಕ್ ಬಳಸಿ ಶ್ವೇತಭವನದ ಮೇಲೆ ದಾಳಿ ಮಾಡಲು ಯತ್ನಿಸಿದ್ದ. ಚುನಾಯಿತ ಅಮೇರಿಕನ್ ಸರ್ಕಾರವನ್ನು ಉರುಳಿಸಿ, ನಾಜಿ ಸಿದ್ಧಾಂತದ ಸರ್ವಾಧಿಕಾರವನ್ನು ಸ್ಥಾಪಿಸುವುದು ಈ ದಾಳಿಯ ಗುರಿಯಾಗಿದೆ. ಅಲ್ಲದೇ ಆತ ಸರ್ಕಾರಿ ಆಸ್ತಿಯನ್ನು ಉದ್ದೇಶಪೂರ್ವಕವಾಗಿ ಹಾನಿ ಮಾಡಿದ್ದ ಎಂದು ಆತನ ಮೇಲೆ ಆರೋಪಿಸಲಾಗಿತ್ತು. ಆತ 2024ರ ಮೇ 13 ರಂದು ತಪ್ಪೊಪ್ಪಿಕೊಂಡಿದ್ದ.

ನ್ಯಾಯಾಲಯದ ದಾಖಲೆಗಳ ಪ್ರಕಾರ, 2023ರ ಮೇ 22 ರಂದು ಮಧ್ಯಾಹ್ನ ಮಿಸೌರಿಯ ಸೇಂಟ್ ಲೂಯಿಸ್‌ ನಿಂದ ವಾಷಿಂಗ್ಟನ್ ಡಿ.ಸಿ.ಗೆ ವಾಣಿಜ್ಯ ವಿಮಾನದಲ್ಲಿ ವರ್ಷಿತ್ ಬಂದಿದ್ದ. ಅಲ್ಲಿ ಸಂಜೆ 6:30 ಕ್ಕೆ ಟ್ರಕ್ ಬಾಡಿಗೆಗೆ ಪಡೆದಿದ್ದ. ಅಲ್ಲಿಂದ ಶ್ವೇತಭವನದ ಬಳಿ ಹೋಗಿ ತಡೆಗೋಡೆಗೆ ಡಿಕ್ಕಿ ಹೊಡೆಸಿ ದಾಂಧಲೆ ನಡೆಸಿದ್ದ. ಕೂಡಲೇ ಆತನನ್ನು ಬಂಧಿಸಲಾಗಿತ್ತು.

Join Whatsapp
Exit mobile version