Home ಟಾಪ್ ಸುದ್ದಿಗಳು ಹೈಕಮಾಂಡ್‌ ಯಾರಿಗೂ ನೋಟಿಸ್‌ ಕೊಟ್ಟಿಲ್ಲ, ಇದು ಬಿಜೆಪಿ ವದಂತಿ: ಸುರ್ಜೇವಾಲ

ಹೈಕಮಾಂಡ್‌ ಯಾರಿಗೂ ನೋಟಿಸ್‌ ಕೊಟ್ಟಿಲ್ಲ, ಇದು ಬಿಜೆಪಿ ವದಂತಿ: ಸುರ್ಜೇವಾಲ

ಬೆಳಗಾವಿ: ಸಾರ್ವಜನಿಕ ವೇದಿಕೆಯಲ್ಲಿ ಪಕ್ಷದ ವಿಷಯಗಳನ್ನು ಪ್ರಸ್ತಾಪಿಸದಂತೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ನೋಟಿಸ್ ಕೊಟ್ಟಿದ್ದು ನನಗೆ ಗೊತ್ತಿಲ್ಲ. ಯಾರು ಈ ರೀತಿಯ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲ ಅವರೇ ಪ್ರಶ್ನಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಸಚಿವರಿಗೂ ನೋಟಿಸ್ ನೀಡಲು ಯಾವುದೇ ಕಾರಣವಿಲ್ಲ. ಬಿಜೆಪಿ ಪ್ರಾಯೋಜಿತ ಆಧಾರ ರಹಿತ ಮಾತುಗಳ ಮೇಲೆ ವಿಶ್ವಾಸ ಇಡಬೇಡಿ ಎಂದರು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೆಪಿಸಿಸಿ ಅಧ್ಯಕ್ಷರು ಬದಲಾವಣೆ ಆಗುತ್ತಾರೆ ಎನ್ನವುದಾದರೆ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಸಮಾವೇಶದ ಸಿದ್ಧತೆ ಪರಿಶೀಲನೆಗಾಗಿ ಇಂದು ಇಲ್ಲಿಗೆ ಏಕೆ ಬರುತ್ತಿದ್ದರು ಎಂದು ಪ್ರಶ್ನಿಸಿದರು.

ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಮಾತ್ರ ಅಪಮಾನ ಮಾಡಿಲ್ಲ. ಅಂಬೇಡ್ಕರ್ ತತ್ವಗಳನ್ನು ಮತ್ತು ಅವರನ್ನು ನಂಬುವವರನ್ನು ಕುರಿತು ಅಪಹಾಸ್ಯ ಮಾಡಿದ್ದಾರೆ. ಇದನ್ನು ವಿರೋಧಿಸಿ ಬೆಳಗಾವಿಯಲ್ಲಿ ಜ.21ರಂದು ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶಕ್ಕೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ಆಗಮಿಸಲಿದ್ದಾರೆ. ಜ.27ರಂದು ಅಂಬೇಡ್ಕರ್ ಜನ್ಮಸ್ಥಳವಿರುವ ಮಧ್ಯಪ್ರದೇಶದಲ್ಲಿ ಸಮಾವೇಶ ಮಾಡಲಿದ್ದೇವೆ ಎಂದು ತಿಳಿಸಿದರು.

ಒಂದು ಕಡೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅಪಮಾನ ಮಾಡುತ್ತಿರುವ ಬಿಜೆಪಿಯವರು, ಮತ್ತೊಂದು ಕಡೆ ಪರಿಶಿಷ್ಟರು, ಹಿಂದುಳಿದ ಸಮುದಾಯದವರು, ಮಹಿಳೆಯರು, ಯುವಕರ ಅಧಿಕಾರ ಕಸಿದುಕೊಳ್ಳುತ್ತಿದ್ದಾರೆ. ಹಾಗಾಗಿ ದೇಶದಾದ್ಯಂತ ಇಂದು ಹೊಸ ಕ್ರಾಂತಿ ಮಾಡುವ ಅವಶ್ಯಕತೆ ಎದುರಾಗಿದೆ. ಪದೇ ಪದೇ ಸಂವಿಧಾನ ಅವಮಾನಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಸಂವಿಧಾನದ ಅಧಿಕಾರವನ್ನು ಬುಲ್ಡೋಜರ್ ಕೆಳಗೆ ತುಳಿವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಸುರ್ಜೇವಾಲ ವಾಗ್ದಾಳಿ ನಡೆಸಿದರು.

Join Whatsapp
Exit mobile version